ಚೆನ್ನೈ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಅವರು ಅನಾರೋಗ್ಯದಿಂದ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ (Prahlad Modi hospitalised). ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪ್ರಹ್ಲಾದ್ ಮೋದಿ ಅವರು ಚೆನ್ನೈನ ಅಯನಂಬಾಕ್ಕಂನಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿಯಾಗಿದೆ.
ಪ್ರಹ್ಲಾದ್ ಮೋದಿಯವರು ಪ್ರಧಾನಿ ನರೇಂದ್ರ ಮೋದಿಯವರ ತಮ್ಮ. ದಾಮೋದರ್ ದಾಸ್ ಮೋದಿ ಮತ್ತು ಹೀರಾಬೆನ್ ದಂಪತಿಯ ಐವರು ಮಕ್ಕಳಲ್ಲಿ ಇವರು ನಾಲ್ಕನೇಯವರು. ಇನ್ನುಳಿದವರು ಸೋಮಾ ಮೋದಿ, ಅಮೃತ್ ಮೋದಿ, ಪಂಕಜ್ ಮೋದಿ, ನರೇಂದ್ರ ಮೋದಿ ಮತ್ತು ಇವರೆಲ್ಲರ ಒಬ್ಬಳೇ ಸಹೋದರಿ ವಾಸಂತಿ ಮೋದಿ. ಇವರಲ್ಲೆಲ್ಲ ಸೋಮಾ ಮೋದಿ ದೊಡ್ಡವರು. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಇದೀಗ ಅಹ್ಮದಾಬಾದ್ನಲ್ಲಿ ಒಂದು ವೃದ್ಧಾಶ್ರಮ ನಡೆಸುತ್ತಿದ್ದಾರೆ.
ಇದನ್ನೂ ಓದಿ: Heeraben Modi | ಪ್ರಧಾನಿ ಮೋದಿ ತಾಯಿ ಶೀಘ್ರ ಚೇತರಿಕೆಗಾಗಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಕುಟುಂಬಸ್ಥರು
ಪ್ರಹ್ಲಾದ್ ಮೋದಿಯವರಿಗೆ 2022ರ ಡಿಸೆಂಬರ್ 27ರಂದು ಮೈಸೂರಿನ ಕಡಕೊಳ ಬಳಿ ಅಪಘಾತ ಆಗಿತ್ತು. ಪ್ರಹ್ಲಾದ್ ಮೋದಿಯವರು ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ಬಂಡಿಪುರಕ್ಕೆ ಹೋಗುತ್ತಿದ್ದರು. ಅಂದು ಕಾರಿನಲ್ಲಿ, ಪುತ್ರ ಮೇಹುಲ್ ಮೋದಿ, ಸೊಸೆ ಜಿಂದಾಲ್ ಮೋದಿ, ಮೊಮ್ಮಗ ಆರು ವರ್ಷದ ಮೇನತ್ ಮೇಹುಲ್ ಮೋದಿ ಹಾಗೂ ಚಾಲಕ ಸತ್ಯನಾರಾಯಣ ಇದ್ದರು.