ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 8ಗಂಟೆಯಿಂದ ಶುರುವಾಗಿದೆ. ಸಾಮಾನ್ಯವಾಗಿ ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಗಳು, ಲೋಕಸಭೆ ಚುನಾವಣೆ ದಿನ ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವಂತೆ ಜನರಿಗೆ ಕರೆ ಕೊಡುತ್ತಾರೆ. ಅಂತೆಯೇ ಇಂದು ಮುಂಜಾನೆ 7.25ಕ್ಕೆ ಟ್ವೀಟ್ ಮಾಡಿದ ಅವರು, ‘ಇಂದು ಗುಜರಾತ್‌ನಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಇಂದು ದಾಖಲೆಯ ಮತದಾನ ಆಗಲಿ. ಅದರಲ್ಲೂ ಮೊದಲ ಬಾರಿ ವೋಟಿಂಗ್ ಮಾಡುತ್ತಿರುವವರು ತಪ್ಪದೆ ನಿಮ್ಮ ಹಕ್ಕು ಚಲಾಯಿಸಿ’ ಎಂದು ಹೇಳಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ಗುಜರಾತ್ ರಾಜ್ಯ ಅಭಿವೃದ್ಧಿ ಮತ್ತು ಶಾಂತಿಗೆ ಸಮಾನಾರ್ಥಕವಾಗಿ ಪರಿವರ್ತನೆಗೊಂಡಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ. ಗುಜರಾತ್‌ನಲ್ಲಿ ಕಳೆದ ಎರಡು ದಶಕಗಳಿಂದ ಇರುವ ಬಲಿಷ್ಠ ಸರ್ಕಾರದಿಂದ ಇದು ಸಾಧ್ಯವಾಗಿದೆ. ಮತದಾರರು ಈ ಸಲವೂ ಉತ್ಸಾಹದಿಂದ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು. ಈ ಮೂಲಕ ಗುಜರಾತ್‌ನಲ್ಲಿ ಅಭಿವೃದ್ಧಿ ಪಥ ಮುಂದುವರಿಸಬೇಕು ಎಂದು ಹೇಳಿದ್ದಾರೆ.
ಸುವರ್ಣಾವಕಾಶ ಮಿಸ್ ಮಾಡ್ಬೇಡಿ ಎಂದ ಕೇಜ್ರಿವಾಲ್
ಗುಜರಾತ್‌ನಲ್ಲಿ ಈ ಬಾರಿ ಬಿಜೆಪಿಗೆ ನೇರಾನೇರ ಸ್ಪರ್ಧೆ ಒಡ್ಡುತ್ತಿರುವುದು ಆಮ್ ಆದ್ಮಿ ಪಕ್ಷ. ಚುನಾವಣಾ ಪೂರ್ವ ಅರವಿಂದ್ ಕೇಜ್ರಿವಾಲ್ ಅವರು ಪದೇಪದೆ ಗುಜರಾತ್ಗೆ ತೆರಳಿ, ಜನರಿಗೆ ಹಲವು ಭರವಸೆಗಳನ್ನು ನೀಡಿದ್ದಾರೆ. ಈ ಬಾರಿ ಬದಲಾವಣೆಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಿ ಎಂದು ಕರೆ ನೀಡಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಅವರು, ‘ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ 89 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಈ 89 ಕ್ಷೇತ್ರಗಳ ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲು ಸಿಕ್ಕ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಗುಜರಾತ್ ರಾಜ್ಯದ ಮತ್ತು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತಹಾಕಿ, ಯಾವಾಗಿನಕ್ಕಿಂತಲೂ ಮಹತ್ವದ್ದೇನಾದರೂ ಈ ಸಲ ಮಾಡಿ’ ಎಂದಿದ್ದಾರೆ.
ಹಾಗೇ, ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿ, ‘ರಾಜ್ಯದ ಪ್ರತಿ ಮಗುವಿನ ಉತ್ತಮ ಶಿಕ್ಷಣ, ಪ್ರತಿಯೊಬ್ಬ ಯುವಕನಿಗೆ ಉದ್ಯೋಗ ಮತ್ತು ಪ್ರತಿ ನಾಗರಿಕನಿಗೂ ಉತ್ತಮ ಆರೋಗ್ಯ ಸೌಲಭ್ಯಕ್ಕಾಗಿ ಮತದಾನ ಮಾಡಿ, ನಿಮ್ಮ ಮತದ ಆಧಾರದ ಮೇಲೆ ಗುಜರಾತ್ ಪ್ರಗತಿ ಸಾಗುತ್ತದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Gujarat Election | ಗುಜರಾತ್‌ನಲ್ಲಿ ಇಂದು ಮೊದಲ ಹಂತದ ಮತದಾನ, ಹೇಗಿದೆ ಚುನಾವಣೆ ಹವಾಮಾನ?