Site icon Vistara News

ಉಕ್ರೇನ್​ನಿಂದ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಬೇಕಾದಾಗ ಪ್ರಧಾನಿ ಮೋದಿ ಎರಡೂ ರಾಷ್ಟ್ರಗಳ ಅಧ್ಯಕ್ಷರಿಗೆ ಹೇಳಿದ್ದೇನು?

PM Modi

ಸೂರತ್​: ರಷ್ಯಾ -ಉಕ್ರೇನ್​ ಯುದ್ಧ ಪ್ರಾರಂಭವಾಗಿ ಉಕ್ರೇನ್​​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್​ ತಾಯ್ನಾಡಿಗೆ ಕರೆತರಬೇಕಾದ ಪರಿಸ್ಥಿತಿ ಬಂದೊದಗಿದ್ದು, ಬಳಿಕ ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಮೂಲಕ ಹಂತಹಂತವಾಗಿ ವಿದ್ಯಾರ್ಥಿಗಳನ್ನು, ಭಾರತೀಯ ನಾಗರಿಕರನ್ನು, ಮರಳಿ ದೇಶಕ್ಕೆ ಕರೆತಂದದ್ದನ್ನು ನಾವೆಲ್ಲ ನೋಡಿದ್ದೇವೆ.

ಅದಾಗಲೇ ಯುದ್ಧ ಶುರುವಾದಾಗ ಉಕ್ರೇನ್​ನಿಂದ, ಅಲ್ಲಿರುವ ಭಾರತೀಯರನ್ನು ಕರೆತರುವುದು ಅಷ್ಟು ಸುಲಭವಾಗಿರಲಿಲ್ಲ. ರಷ್ಯಾ ಮತ್ತು ಉಕ್ರೇನ್​ ಎರಡೂ ದೇಶಗಳೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಬೇಕಿತ್ತು. ಹೀಗೆ ಮಾತುಕತೆ ನಡೆಸುವಾಗ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಮತ್ತು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ​ ಬಳಿ ಏನು ಹೇಳಿದ್ದರು ಎಂಬುದನ್ನು ಇದೀಗ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​. ಜೈಶಂಕರ್ ಹೇಳಿದ್ದಾರೆ.

ಗುಜರಾತ್​ನ ಸೂರತ್​ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಜೈಶಂಕರ್ ‘ಆಗಲೇ ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿತ್ತು. ಸುಮಿ ಮತ್ತು ಕಾರ್ಖೀವ್​​ನಲ್ಲಿ ಭಾರತದ ಹಲವು ವಿದ್ಯಾರ್ಥಿಗಳು ಸಿಲುಕಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿಯವರು ಪುಟಿನ್​ ಮತ್ತು ಝೆಲೆನ್ಸ್ಕಿ ಇಬ್ಬರಿಗೂ ಕರೆ ಮಾಡಿದ್ದರು. ‘ನಮ್ಮ ಮಕ್ಕಳು ಉಕ್ರೇನ್​​ನಲ್ಲಿ ಸಿಲುಕಿದ್ದಾರೆ. ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದಿದ್ದರು. ಭಾರತೀಯ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ಆಗುವುದಿಲ್ಲ ಎಂಬ ಭರವಸೆ ಆ ಕ್ಷಣಕ್ಕೇ ಎರಡೂ ರಾಷ್ಟ್ರಗಳ ಅಧ್ಯಕ್ಷರಿಂದ ಸಿಕ್ಕಿತ್ತು. ಬಳಿಕ ಏನೂ ತೊಂದರೆಯಿಲ್ಲದೆ ನಮ್ಮ ವಿದ್ಯಾರ್ಥಿಗಳನ್ನು ರಕ್ಷಿಸಲು ಸಾಧ್ಯವಾಯಿತು ಎಂದು ಜೈಶಂಕರ್​ ತಿಳಿಸಿದರು.

ಫೆಬ್ರವರಿ ಕೊನೇ ವಾರಗಳಲ್ಲಿ, ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿದಾಗ ಭಾರತ ಮೂಲದ ಒಬ್ಬ ವಿದ್ಯಾರ್ಥಿ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದ. ಅದಾದ ಮೇಲೆ ಉಳಿದೆಲ್ಲರನ್ನೂ ಸುರಕ್ಷಿತವಾಗಿಯೇ ಕರೆತರಲಾಗಿತ್ತು. ಉಕ್ರೇನ್​ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು, ನಾಗರಿಕರು ಸೇರಿ 22 ಸಾವಿರಕ್ಕೂ ಹೆಚ್ಚು ಭಾರತೀಯ ಮೂಲದವರು ವಾಪಸ್​ ಬಂದಿದ್ದಾರೆ. ಕೊರೊನಾ ವೈರಸ್​, ಹವಾಮಾನ ವೈಪರೀತ್ಯದ ಮಧ್ಯೆಯೂ ಭಾರತ ಯಶಸ್ವಿಯಾಗಿ ಭಾರತೀಯರ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಆ ಕ್ಷಣವನ್ನು ಈಗ ಜೈಶಂಕರ್​ ನೆನಪಿಸಿಕೊಂಡರು.

ಇದನ್ನೂ ಓದಿ: Russia Rape War | ಉಕ್ರೇನ್‌ನಲ್ಲಿರುವ ತನ್ನ ಸೈನಿಕರಿಗೆ ವಯಾಗ್ರ ನೀಡಿದ ರಷ್ಯಾ, ಅತ್ಯಾಚಾರಕ್ಕೆ ಪ್ರಚೋದನೆ!

Exit mobile version