Site icon Vistara News

ಸೋಷಿಯಲ್​ ಮೀಡಿಯಾದಲ್ಲಿ ಪ್ರೊಫೈಲ್​ ಫೋಟೊ ಬದಲಿಸಿದ ಪ್ರಧಾನಿ: ರಾರಾಜಿಸುತ್ತಿದೆ ರಾಷ್ಟ್ರಧ್ವಜ

Narendra Modi

ನವ ದೆಹಲಿ: ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳು ತುಂಬುವ ಹಿನ್ನೆಲೆಯಲ್ಲಿ ಆಜಾದಿ ಕಾ ಅಮೃತ್​ ಮಹೋತ್ಸವದ ಆಚರಣೆ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಗಸ್ಟ್​ 13-15ರವರೆಗೆ ‘ಹರ್​ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಂಡಿದೆ. ಈ ಉಪಕ್ರಮದ ಭಾಗವಾಗಿ ಆಗಸ್ಟ್​ 2ರಿಂದ 15ರವರೆಗೆ ದೇಶವಾಸಿಗಳು ತಮ್ಮ ಸೋಷಿಯಲ್​ ಮೀಡಿಯಾ ಪ್ರೊಫೈಲ್​​ಗಳಿಗೆ ರಾಷ್ಟ್ರಧ್ವಜದ ಫೋಟೋ ಹಾಕಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ತಮ್ಮ ಮನ್​ ಕೀ ಬಾತ್​​ನಲ್ಲಿ ಕರೆಕೊಟ್ಟಿದ್ದರು. ಅದರಂತೆ ಈಗಾಗಲೇ ಸಾವಿರಾರು ಜನರು ತಮ್ಮ ಫೇಸ್​ಬುಕ್​, ವಾಟ್ಸ್​ಆ್ಯಪ್​, ಟ್ವಿಟರ್​, ಇನ್​ಸ್ಟಾಗ್ರಾಂ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್​ಗೆ ರಾಷ್ಟ್ರಧ್ವಜದ ಫೋಟೋ ಹಾಕಿಕೊಂಡಿದ್ದಾರೆ. ಕೆಲವರು ರಾಷ್ಟ್ರಧ್ವಜದೊಟ್ಟಿಗಿನ ಸೆಲ್ಫೀಯನ್ನೂ ಅಪ್​ಲೋಡ್ ಮಾಡಿಕೊಂಡಿದ್ದಾರೆ.

ಇದೆಲ್ಲದರ ಮಧ್ಯೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ತಮ್ಮ ಟ್ವಿಟರ್​, ಫೇಸ್​​ಬುಕ್​​ಗಳ ಪ್ರೊಫೈಲ್​ಗೆ ಚೆಂದನೆಯ ರಾಷ್ಟ್ರಧ್ವಜದ ಫೋಟೋ ಅಪ್ಲೋಡ್ ಮಾಡಿದ್ದಾರೆ. ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸ ಮಾಡಿದ ಪಿಂಗಳಿ ವೆಂಕಯ್ಯನವರ ಜನ್ಮ ದಿನ ಆಗಸ್ಟ್​ 2 (ಇಂದು). ಅವರ ಗೌರವಾರ್ಥ ಆಗಸ್ಟ್​ 2ರಿಂದ 15ರವರೆಗೆ ತ್ರಿವರ್ಣ ಧ್ವಜವನ್ನೇ ಸಂಭ್ರಮಿಸೋಣ ಎಂದು ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ. ಹಾಗೇ, ಹರ್​ ಘರ್​ ತಿರಂಗಾದಡಿ ಆಗಸ್ಟ್​ 13-15ರವರೆಗೆ ದೇಶದ ಪ್ರತಿ ಮನೆಯ ಮೇಲೆ ಕೂಡ ರಾಷ್ಟ್ರಧ್ವಜ ಹಾರಿಸುವಂತೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಕಡೆ ಬಿಜೆಪಿ ಕಾರ್ಯಕರ್ತರು ಸಜ್ಜಾಗುತ್ತಿದ್ದಾರೆ. ಹಾಗೇ, ಬಿಜೆಪಿಯ ಬಹುತೇಕ ಎಲ್ಲ ನಾಯಕರೂ ಈಗಾಗಲೇ ಪಧಾನಿ ಮೋದಿ ಮಾತನ್ನು ಪಾಲಿಸಿ, ತಮ್ಮ ಡಿಸ್​ಪ್ಲೇ ಫೋಟೋ ಬದಲಿಸಿಕೊಂಡಿದ್ದಾರೆ.

75ರ ಐಡಿಯಾಗಳು (Ideas@75): ಮುಂದಿನ 25 ವರ್ಷಗಳನ್ನು, ಅಂದರೆ ಸ್ವಾತಂತ್ರ್ಯದ 75ನೇ ವರ್ಷದಿಂದ 100ನೇ ವರ್ಷವರೆಗಿನ ಕಾಲವನ್ನು ʻಅಮೃತಕಾಲʼ ಎಂದು ಕರೆಯಬಹುದು. ದೇಶ ಇನ್ನಷ್ಟು ಸ್ಫೂರ್ತಿಯಿಂದ ಮುನ್ನಡೆಯಬೇಕಿರುವ ಕಾಲವಿದು. ದೇಶವನ್ನು ಪ್ರಗತಿಯ ಹಾದಿಯಲ್ಲಿ ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಹೊಸ ಐಡಿಯಾಗಳು, ಚಿಂತನೆಗಳು, ಯೋಜನೆಗಳು ಬೇಕಿವೆ. ಇರುವುದನ್ನು ಗುರುತಿಸಬೇಕಿವೆ. ಜಗತ್ತಿಗೆ ದೇಶದ ಕೊಡುಗೆಯನ್ನು ಗುರುತಿಸುವುದೂ ಆಗಬೇಕಿದೆ. ಇದರ ಯೋಜನೆಗಳಲ್ಲಿ ʻಕಾಶಿ ಉತ್ಸವʼ (ಕಾಶಿಯಲ್ಲಿ ಸಾಹಿತ್ಯೋತ್ಸವ) ಹಾಗೂ ದೇಶದ 75 ಲಕ್ಷ ವಿದ್ಯಾರ್ಥಿಗಳು ಪ್ರಧಾನಿಗೆ 2047ರ ಭಾರತದ ಬಗ್ಗೆ ಪತ್ರ ಬರೆಯುವುದು ಸೇರಿದೆ.

ಇದನ್ನೂ ಓದಿ: MyBharat | ಸ್ವಾತಂತ್ರ್ಯೋತ್ಸವ ಸರ್ಕಾರಿ ಕಾರ್ಯಕ್ರಮವಾಗದೆ ಜನೋತ್ಸವವಾಗಲಿ: ಹರಿಪ್ರಕಾಶ್

Exit mobile version