Site icon Vistara News

Chandrayaan 3: ದೇಶದ ಕನಸು ಆಗಸಕ್ಕೆ; ಫ್ರಾನ್ಸ್​ನಿಂದಲೇ ಚಂದ್ರಯಾನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ

Chandrayaan 3 PM Modi

ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 (Chandrayaan 3)ಗೆ ಕೌಂಟ್​ಡೌನ್ ಶುರುವಾಗಿದೆ. ಒಂದು ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಇಡೀ ದೇಶ ಕಾತರತೆಯಿಂದ ಕಾಯುತ್ತಿದೆ. ಇದೇ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಟ್ವೀಟ್ ಮಾಡಿ, ಇಸ್ರೋದ (ISRO) ಮಹಾನ್ ಮಿಷನ್​ ಚಂದ್ರಯಾನ-3ಕ್ಕೆ ಶುಭ ಹಾರೈಸಿದ್ದಾರೆ. ‘ಭಾರತದ ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿಯೇ ಜುಲೈ 14 ಸುವರ್ಣಾಕ್ಷರಗಳಿಂದ ಬರೆದಿಡಲ್ಪಡುವ ದಿನ ಆಗಲಿದೆ. ನಮ್ಮ ಚಂದ್ರಯಾನ 3ರ ಪ್ರಯಾಣ ಇನ್ನೇನು ಕೆಲವೇ ಹೊತ್ತಲ್ಲಿ ಪ್ರಾರಂಭವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆ ನಮ್ಮ ದೇಶದ ಭರವಸೆ ಮತ್ತು ಕನಸುಗಳನ್ನು ಹೊತ್ತು ಸಾಗಲಿದೆ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಸದ್ಯ ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿ ಇದ್ದಾರೆ. ಅಲ್ಲಿಂದ ಅವರು ಯುಎಇಗೆ ತೆರಳಲಿದ್ದಾರೆ. ಫ್ರಾನ್ಸ್​ನಿಂದಲೇ ಅವರು ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಚಂದ್ರಯಾನ 3 ಉಡಾವಣೆಗಾಗಿ ಇಡೀ ದೇಶವೇ ಶುಭ ಹಾರೈಸುತ್ತಿದೆ. ಬಾಲಿವುಡ್ ಗಣ್ಯರು, ರಾಜಕೀಯ ನಾಯಕರೆಲ್ಲ ಇಸ್ರೋಕ್ಕೆ ಆಲ್​ ದಿ ಬೆಸ್ಟ್ ಹೇಳುತ್ತಿದ್ದಾರೆ. ಉತ್ತರ ಪ್ರದೇಶ ಪೊಲೀಸ್​, ದೆಹಲಿ ಪೊಲೀಸ್ ಇಲಾಖೆಯಿಂದಲೂ ಟ್ವೀಟ್ ಮಾಡಿ ಶುಭ ಕೋರಲಾಗಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ವೆಚ್ಚ ಆದಿಪುರುಷ್‌ ಸಿನಿಮಾ ಬಜೆಟ್‌ಗಿಂತ ಕಡಿಮೆ; ಬಿಸಿ ಬಿಸಿ ಚರ್ಚೆ ಶುರು

ಚಂದ್ರಯಾನ-3 ಇಂದು ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದೆ. ಚಂದ್ರಯಾನ-3 ನೌಕೆಯ ಮೂಲ ಕೆಲಸ ಚಂದಿರನಲ್ಲಿ ಇಳಿಯುವುದು (ಲ್ಯಾಂಡಿಂಗ್) ಮತ್ತು ಪರಿಶೀಲಿಸುವುದು (ರೋವಿಂಗ್). 2019ರಲ್ಲಿ ನಡೆಸಿದ ಚಂದ್ರಯಾನ-2 ಭಾಗಶಃ ಯಶಸ್ವಿಯಾಗಿತ್ತು. ಅದರಲ್ಲಿದ್ದಂತೆ ಈ ಬಾರಿ ಆರ್ಬಿಟರ್ ಇಲ್ಲ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಮತ್ತು ಹಗುರವಾಗಿ ಇಳಿಯುವುದು, ರೋವರ್ ಚಂದ್ರನ ಮೇಲೆ ಸಂಚರಿಸುವುದು, ಕೆಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಉದ್ದೇಶ. ಶುಕ್ರವಾರ ನಭಕ್ಕೆ ಹಾರಲಿರುವ ಚಂದ್ರಯಾನ-3 ಮಿಷನ್‌, ಆಗಸ್ಟ್‌ 23ರಂದು 5.47 ನಿಮಿಷಕ್ಕೆ ಸಾಫ್ಟ್‌ ಲ್ಯಾಂಡ್‌ ಆಗುವ ನಿರೀಕ್ಷೆ ಇದೆ.

Exit mobile version