ಕಡಲ ಭದ್ರತೆಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಆದ್ಯತೆ ಕೊಡುತ್ತಿದೆ. ಭಾರತದ ಕಡಲು ಪ್ರದೇಶದ ಭದ್ರತೆಗಾಗಿ ಭಾರತದ ನೌಕಾಪಡೆ, ಕರಾವಳಿ ರಕ್ಷಕ ಪಡೆಗಳು, ಕಡಲ ಪೊಲೀಸ್ ಮತ್ತು ಮೀನುಗಾರರನ್ನು ಸಂಪೂರ್ಣವಾಗಿ ಸುದರ್ಶನ ಚಕ್ರ (Sudarshan Chakra)ವನ್ನಾಗಿ ಮಾಡಿಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ (PM Modi) ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಒಂದು ಸುಭದ್ರ ಕಡಲು ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು. ಗುಜರಾತ್ನ ದ್ವಾರಕಾದಲ್ಲಿ ಇರುವ ಕರಾವಳಿ ಪೊಲೀಸರ ರಾಷ್ಟ್ರೀಯ ಅಕಾಡೆಮಿ (National Academy of Coastal Policing (NACP)ಯ ಶಾಶ್ವತ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿದರು. ಈ ಎನ್ಎಸಿಪಿಯ ಕ್ಯಾಂಪಸ್ ಸುಮಾರು 470 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.
‘ತೆರೆದ ಸಾಗರದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳು, ವಿಮಾನಗಳು ಭದ್ರತೆ ಒದಗಿಸುತ್ತಿವೆ. ಸುತ್ತುವರಿದಿರುವ ಸಮುದ್ರಗಳ ಮಧ್ಯಭಾಗದಲ್ಲಿ ಕರಾವಳಿ ರಕ್ಷಕ ಪಡೆಗಳು ಮತ್ತು ಭಾರತೀಯ ನೌಕಾಪಡೆಗಳು ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿವೆ. ಇನ್ನು ಸಾಗರದ ಪ್ರಾದೇಶಿಕ ಭಾಗಗಳಲ್ಲಿ ಅಂದರೆ ಸಾಗರದ ತೀರದಿಂದ ಕೆಲವೇ ಕಿಮೀ ದೂರ ಇರುವ ಪ್ರದೇಶಗಳಲ್ಲಿ ಗಡಿ ಭದ್ರತಾ ಪಡೆಯ ಜಲ ವಿಭಾಗದ ಸಿಬ್ಬಂದಿ ಕಾವಲಿಗಿದ್ದಾರೆ. ಅದರಾಚೆ, ಸಮುದ್ರ ಭಾಗದ ಹಳ್ಳಿಗಳಲ್ಲಿ ವಾಸವಾಗಿರುವ ನಮ್ಮ ದೇಶಭಕ್ತ ಮೀನುಗಾರರು ಕೂಡ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಇವರು ಮಾಹಿತಿಯ ಮುಖ್ಯ ಮೂಲಗಳಾಗಿದ್ದಾರೆ’ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ: Amit Shah: ಆಧುನಿಕ ಭಾರತದ ಇತಿಹಾಸಕ್ಕೆ ನಾಲ್ವರು ಗುಜರಾತಿಗಳ ಕೊಡುಗೆ ಅನನ್ಯ ಎಂದ ಅಮಿತ್ ಶಾ, ಯಾರು ಆ ನಾಲ್ವರು?
ಈ ಹಿಂದೆ ಆಡಳಿತ ನಡೆಸಿದವರ ನಿರ್ಲಕ್ಷ್ಯದಿಂದಾಗಿ ನಮ್ಮ ದೇಶದ ಕಡಲ ಭದ್ರತೆ ಸ್ಥಿರವಾಗಿರಲಿಲ್ಲ. ಇದೇ ಕಾರಣಕ್ಕೆ ದೇಶಕ್ಕೆ ಅಪಾಯ ಉಂಟಾಯಿತು ಎಂದ ಅಮಿತ್ ಶಾ, 2008ರ ಮುಂಬಯಿ ದಾಳಿ ಬಗ್ಗೆ ಉಲ್ಲೇಖ ಮಾಡಿದರು. ಹಾಗೇ, ಈಗ ಭಾರತದ ಸರ್ಕಾರವು ಎಲ್ಲ ಆಯಾಮಗಳಲ್ಲಿ ಕರಾವಳಿ ಭದ್ರತೆಯನ್ನು ದೃಢಪಡಿಸಿದೆ. ಕಡಲಿನ ಸಮಗ್ರ ಭದ್ರತೆಗಾಗಿ ಕರಾವಳಿ ಭದ್ರತಾ ನೀತಿಯನ್ನು ಅಳವಡಿಸಿಕೊಂಡು, ಅದರ ಅನ್ವಯ ಕೆಲಸ ಮಾಡಲಾಗುತ್ತಿದೆ ಎಂದೂ ತಿಳಿಸಿದರು. 2008ರಲ್ಲಿ ಲಷ್ಕರೆ ತೊಯ್ಬಾ ಉಗ್ರರು ಸಮುದ್ರ ಮಾರ್ಗದ ಮೂಲಕವೇ ಮುಂಬಯಿಗೆ ಬಂದು ದಾಳಿ ಮಾಡಿದ್ದರು. ಅದರಲ್ಲಿ 166 ಮಂದಿ ಮೃತಪಟ್ಟಿದ್ದರು. ಅದನ್ನೇ ಇಲ್ಲಿ ಅಮಿತ್ ಶಾ ನೆನಪಿಸಿಕೊಂಡು, ಅಂಥ ದಾಳಿಗಳು ಈಗೆಲ್ಲ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.