ನವ ದೆಹಲಿ: ಇಡೀ ದೇಶದ ಆಡಳಿತ, ಅಂತಾರಾಷ್ಟ್ರೀಯ ವ್ಯವಹಾರಗಳ ಜವಾಬ್ದಾರಿ ಹೆಗಲ ಮೇಲಿದ್ದರೂ ಪ್ರಧಾನಿ ನರೇಂದ್ರ ಮೋದಿ ತನ್ನಮ್ಮನನ್ನು ಕಿಂಚಿತ್ತೂ ನಿರ್ಲಕ್ಷಿಸಲಿಲ್ಲ. ದೆಹಲಿಗೆ ಬರಲೊಪ್ಪದ ಅಮ್ಮನನ್ನು ನೋಡಲು ಅವರೇ ಆಗಾಗ ಗುಜರಾತ್ನಲ್ಲಿರುವ ತಾಯಿ ಮನೆಗೆ ಬರುತ್ತಿದ್ದರು. ಆ ಹಿರಿ ಜೀವಕ್ಕೆ ಸಾಕಷ್ಟು ಸಮಯಕೊಟ್ಟು, ಪಕ್ಕದಲ್ಲಿ ಕೂತು ಮಾತನಾಡಿ, ಜತೆಗೆ ಊಟ ಮಾಡಿ, ಆಶೀರ್ವಾದ ಬೇಡಿ ತೆರಳುತ್ತಿದ್ದರು. ಅಂಥ ಅಮ್ಮನನ್ನು ಪ್ರಧಾನಿ ಮೋದಿ ತಮ್ಮ 72ನೇ ವಯಸ್ಸಿನಲ್ಲಿ ಕಳೆದುಕೊಂಡಿದ್ದಾರೆ.
ಇದೇ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 2015ರಲ್ಲಿ ಅಮೆರಿಕದಲ್ಲಿ ಆಡಿದ್ದ ಮಾತುಗಳು ನೆನಪಿಗೆ ಬರುತ್ತವೆ. ಆಗಿನ್ನೂ ಪ್ರಧಾನಿಯಾಗಿ ಒಂದು ವರ್ಷವಾಗಿತ್ತು. ಅಮೆರಿಕದಲ್ಲಿರುವ ಫೇಸ್ಬುಕ್ ಪ್ರಧಾನ ಕಚೇರಿಯಲ್ಲಿ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು, ತಮ್ಮ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅವರು ಪಟ್ಟ ಕಷ್ಟವನ್ನೆಲ್ಲ ಹೇಳಿಕೊಂಡು ಕಣ್ತುಂಬಿಕೊಂಡಿದ್ದರು.
‘ನಾವೆಲ್ಲ ಚಿಕ್ಕವರಿದ್ದಾಗ ಮನೆಯಲ್ಲಿ ಬಡತನವಿತ್ತು. ಖರ್ಚು ನಿಭಾಯಿಸಲು ನನ್ನಮ್ಮ ತುಂಬ ಕಷ್ಟಪಡುತ್ತಿದ್ದರು. ಅಕ್ಕಪಕ್ಕದ ಮನೆಗೆ ಹೋಗಿ ಪಾತ್ರೆ ತೊಳೆಯುತ್ತಿದ್ದರು. ನೀರು ತುಂಬಿಕೊಡುತ್ತಿದ್ದರು. ಇಡೀ ಮನೆ ಕೆಲಸ ಮಾಡುತ್ತಿದ್ದರು. ಒಬ್ಬ ತಾಯಿ ತನ್ನ ಮಕ್ಕಳನ್ನು ಬೆಳೆಸಲು ಯಾವುದೇ ಕಷ್ಟಕ್ಕೂ ಸಿದ್ಧರಾಗಿರುತ್ತಾರೆ. ನನ್ನ ತಾಯಿ ಅಂತಲ್ಲ, ಸಾವಿರಾರು ತಾಯಂದಿರೂ ಹೀಗೆ ಇರುತ್ತಾರೆ’ ಎಂದು ನರೇಂದ್ರ ಮೋದಿ ಹೇಳಿದ್ದರು.
ನರೇಂದ್ರ ಮೋದಿಯವರು ತಮ್ಮ ತಾಯಿಯನ್ನು ಸದಾ ಸಂಭ್ರಮಿಸುತ್ತಿದ್ದರು. ಈ ಸಲ ತನ್ನಮ್ಮ ಹೀರಾಬೆನ್ ಅವರು 100ನೇ ವರ್ಷಕ್ಕೆ ಕಾಲಿಟ್ಟಾಗ ಕೂಡ ಪ್ರಧಾನಿ ಮೋದಿ ತಮ್ಮ ಬ್ಲಾಗ್ನಲ್ಲಿ ಅತ್ಯಂತ ಭಾವನಾತ್ಮಕ ಸಾಲುಗಳನ್ನು ಪಡೆದುಕೊಂಡಿದ್ದರು. ‘ತಮ್ಮ ಮನೆ ಹೇಗಿತ್ತು. ಎಷ್ಟು ಬಡತನವಿತ್ತು. ಅಮ್ಮ ಹೇಗೆಲ್ಲ ಅದನ್ನು ನಿಭಾಯಿಸಿದರು ಎಂಬುದನ್ನೆಲ್ಲ ಸವಿವರವಾಗಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Heeraben Modi | ಗಾಂಧಿ ನಗರದಲ್ಲಿ ನಡೆದ ಹೀರಾಬೆನ್ ಮೋದಿ ಅಂತ್ಯಕ್ರಿಯೆ