ಎರಡು ದಿನಗಳ ಗುಜರಾತ್ ಪ್ರವಾಸ ಮುಗಿಸಿ ಸೆ. 30 ರಂದು ರಾತ್ರಿ ರಾಜಸ್ಥಾನಕ್ಕೆ ತೆರಳಿದ ಪ್ರಧಾನಿ ಮೋದಿ, ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡದೆ, ವಾಪಸ್ ಆಗಿದ್ದಾರೆ. ಹೀಗೆ ಬರುವ ಮುನ್ನ ಜನರ ಎದುರು ನಿಂತು, ಕ್ಷಮೆ ಕೇಳಿದ್ದಾರೆ. ‘ನಾನು ಮತ್ತೊಮ್ಮೆ ಇಲ್ಲಿಗೆ ಬರುತ್ತೇನೆ. ಆಗ ಖಂಡಿತ ನಿಮ್ಮನ್ನೆಲ್ಲ ಉದ್ದೇಶಿಸಿ ಭಾಷಣ ಮಾಡುತ್ತೇನೆ. ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡುತ್ತೇನೆ’ ಎಂದು ಭರವಸೆಯನ್ನೂ ಕೊಟ್ಟು ಹೋಗಿದ್ದಾರೆ.
ರಾಜಸ್ಥಾನದ ಸಿರೋಹಿಯಲ್ಲಿರುವ ಅಬು ರೋಡ್ ಏರಿಯಾದಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆ ಆಯೋಜನೆಯಾಗಿತ್ತು. ಆದರೆ ಸರಿಯಾದ ಸಮಯಕ್ಕೆ ಅಲ್ಲಿಗೆ ಹೋಗಲು ಮೋದಿಯವರಿಗೆ ಸಾಧ್ಯವಾಗಲಿಲ್ಲ. ಅವರು ಅಲ್ಲಿಗೆ ತಲುಪಿದಾಗ ರಾತ್ರಿ 10 ಗಂಟೆಯಾಗಿತ್ತು. ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಬಳಸುವಂತಿಲ್ಲ ಎಂಬ ನಿಯಮ ಪಾಲಿಸುವ ಸಲುವಾಗಿ ಮೋದಿ ಅಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿಲ್ಲ. ಈ ಬಗ್ಗೆ ಮಾತನಾಡಿದ ಅವರು, ‘ನಾನಿಲ್ಲಿ ತುಂಬಾ ತಡವಾಗಿ ಬಂದೆ..ಆಗಲೇ ರಾತ್ರಿ 10 ಗಂಟೆ ಆಗಿಹೋಗಿದೆ. ಹೀಗಾಗಿ ಮೈಕ್ ಬಳಕೆ ಮಾಡುವುದಿಲ್ಲ..ನಿಯಮ ಪಾಲನೆ ಮಾಡುತ್ತೇನೆ. ಹಾಗೇ ತಡವಾಗಿ ಬಂದಿದ್ದಕ್ಕೆ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದ್ದಾರೆ. ನಂತರ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆ ಕೂಗಿದ್ದಾರೆ. ಅದಕ್ಕೆ ಪ್ರತಿಯಾಗಿ ನೆರೆದಿದ್ದ ಜನರೂ ಅದೇ ಘೋಷವಾಕ್ಯ ಹೇಳಿದರು.
ರಾಜಸ್ಥಾನ ತಲುಪಿದ ಮೋದಿಯವರನ್ನು ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಬಿಜೆಪಿ ಹಿರಿಯ ನಾಯಕ ಗುಲಾಬ್ ಚಾಂದ್ ಕಟಾರಿಯಾ ಸ್ವಾಗತಿಸಿದರು. ಮೋದಿ ಬರುತ್ತಾರೆಂದು, ಸಿರೋಹಿ, ದುಂಗಾರ್ಪುರ, ಬನ್ಸ್ವಾರ, ಚಿತ್ತೋರ್‌ಗಢ, ಪ್ರತಾಪ್‌ಗಢ, ಪಾಲಿ, ಉದಯಪುರ ಸೇರಿ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿಂದ ಪಕ್ಷದ ಕಾರ್ಯಕರ್ತರು ಆಗಮಿಸಿದ್ದರು.
ಇದನ್ನೂ ಓದಿ: Mann Ki Baat 2022 | ದೀನ್ ದಯಾಳರ ಆದರ್ಶಗಳನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ