ತೆಲಂಗಾಣ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi)ಯವರು ಇಂದು ತೆಲಂಗಾಣದ ಸಿಕಂದರಾಬಾದ್ ರೈಲ್ವೆ ಸ್ಟೇಶನ್ನಲ್ಲಿ ಹೊಸ ವಂದೇ ಭಾರತ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಈ ರೈಲು ತೆಲಂಗಾಣದ ಸಿಕಂದರಾಬಾದ್ಮತ್ತು ಆಂಧ್ರಪ್ರದೇಶದ ತಿರುಪತಿ ನಡುವೆ ಸಂಚರಿಸಲಿದೆ. ದೇಶದ 13ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಎರಡೂ ನಗರಗಳ ನಡುವಿನ 660 ಕಿಮೀ ದೂರವನ್ನು 8 ತಾಸು-30 ನಿಮಿಷಗಳಲ್ಲಿ ಕ್ರಮಿಸಲಿದೆ. ಅಂದರೆ ಈ ಎರಡೂ ನಗರಗಳ ಮಧ್ಯೆ ಸಂಚರಿಸುವ ಎಲ್ಲ ಎಕ್ಸ್‌ಪ್ರೆಸ್ ರೈಲುಗಳಿಗಿಂತಲೂ ಮೂರು ತಾಸು ಕಡಿಮೆ ಅವಧಿಯಲ್ಲಿ ಗಮ್ಯ ತಲುಪಲಿದೆ. ಈ ರೈಲು ಮಂಗಳವಾರ ಹೊರತು ಪಡಿಸಿ ಉಳೆದಲ್ಲ ದಿನವೂ ಸಂಚಾರ ಮಾಡಲಿದೆ. ಸಿಕಂದರಾಬಾದ್ನಿಂದ ಹೊರಟರೆ ನಲಗೊಂಡಾ, ಗುಂಟೂರು, ಒಂಗೋಲ್ ಮತ್ತು ನೆಲ್ಲೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ತೆಲಂಗಾಣದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಿಯಾದ ಮೇಲೆ, ಸಿಕಂದರಾಬಾದ್ ರೈಲು ನಿಲ್ದಾಣದ ಮರು ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಸುಮಾರು 11,360 ಕೋಟಿ ರೂ.ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಕಳೆದ ಜನವರಿಯಲ್ಲಿ ತೆಲಂಗಾಣದ ಸಿಕಂದರಾಬಾದ್ನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿತ್ತು. ಅದಾಗಿ ಮೂರೇ ತಿಂಗಳಲ್ಲಿ ಇನ್ನೊಂದು ರೈಲು ಸಂಚಾರ ಶುರುವಾಗಿದೆ. ಇಂದಿನಿಂದ ಸಂಚಾರ ಪ್ರಾರಂಭಿಸಿರುವ ರೈಲು, ತೆಲುಗು ಭಾಷಿಕರಿಗೆ ಲಭ್ಯವಾಗುತ್ತಿರುವ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. ಆಂಧ್ರದಲ್ಲಿರುವ ಪ್ರಸಿದ್ಧ ತಿರುಪತಿ ದೇವಾಲಯಕ್ಕೆ ಹೋಗುವ ಪ್ರಯಾಣಿಕರಿಗೆ ಈ ರೈಲು ಅನೂಕೂಲ ಮಾಡಿಕೊಡಲಿದೆ. ಅಷ್ಟೇ ಅಲ್ಲ, ಐಟಿ ಸಿಟಿ ಎನ್ನಿಸಿಕೊಂಡಿರುವ ಹೈದರಾಬಾದ್ಗೂ ಸಂಪರ್ಕ ಕಲ್ಪಿಸುತ್ತದೆ.
ಇದನ್ನೂ ಓದಿ: Indian Railway: ಇವರೇ ನೋಡಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೊದಲ ಮಹಿಳಾ ಲೋಕೊಮೋಟಿವ್ ಪೈಲಟ್
ವಿಶೇಷತೆಗಳೇನು?
ವಂದೇ ಭಾರತ್ ರೈಲಿನಲ್ಲಿ ಸ್ವಯಂಚಾಲಿತ ಬಾಗಿಲುಗಳಿರುತ್ತವೆ. ಮನರಂಜನೆಯ ಉದ್ದೇಶಕ್ಕೆ ಹಾಟ್ ಸ್ಪಾಟ್ ವೈ-ಫೈ ಸೌಲಭ್ಯ ಸಿಗುತ್ತದೆ. ಸೀಟುಗಳು ಸುಖಾಸೀನ ಕಲ್ಪಿಸುತ್ತವೆ. ಎಲ್ಲ ಶೌಚಾಲಯಗಳು ಬಯೊ-ವಾಕ್ಯೂಮ್ ಮಾದರಿಯದ್ದಾಗಿದೆ. ಅಡುಗೆ ಕೋಣೆಯೂ ಇದ್ದು, ಬಿಸಿ ಊಟ, ಬಿಸಿ ಮತ್ತು ತಣ್ಣೀರು ವಿತರಣೆಯ ಸೌಲಭ್ಯವಿದೆ. ಪ್ರತಿ ಬೋಗಿಯಲ್ಲೂ ವೈ-ಫೈ ಕಂಟೆಂಟ್ ಸಿಗುತ್ತದೆ. ಪ್ರತಿ ಕೋಚ್‌ನಲ್ಲೂ 32 ಇಂಚಿನ ಸ್ಕ್ರೀನ್ ಇರುತ್ತದೆ. ವೀಕ್ಷಕರಿಗೆ ನ್ಯೂಸ್ ಹಾಗೂ ಇನ್ಫೋಟೈನ್‌ಮೆಂಟ್ ದೊರೆಯುತ್ತದೆ. ವಿಕಲಚೇತನರಿಗೆ ಸೀಟ್ ಹ್ಯಾಂಡಲ್, ಬ್ರೈಲ್ ಲಿಪಿಯಲ್ಲಿ ಸೀಟಿನ ಸಂಖ್ಯೆ, 180 ಡಿಗ್ರಿ ಸುತ್ತುವ ಆಸನಗಳು ಎಕ್ಸಿಕ್ಯುಟಿವ್ ಬೋಗಿಗಳಲ್ಲಿ ಲಭ್ಯ. ವಂದೇ ಭಾರತ್ ಎಕ್ಸ್‌ಪ್ರೆಸ್ 392 ಟನ್ ಭಾರವಿದೆ. 16 ಬೋಗಿಗಳನ್ನು ಒಳಗೊಂಡಿದೆ. ಒಟ್ಟು ಸೀಟುಗಳ ಸಾಮರ್ಥ್ಯ 1128 ಆಗಿದೆ.