ಅಹ್ಮದಾಬಾದ್: ಗುಜರಾತ್ನ ಅಹ್ಮದಾಬಾದ್ ರೈಲ್ವೆ ಯೋಜನೆ (12,925 ಕೋಟಿ ರೂ.ವೆಚ್ಚ)ಯ ಮೊದಲ ಹಂತವಾದ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದಾರೆ. ನರೇಂದ್ರ ಮೋದಿ ಸೆ.29ರಿಂದ ಗುಜರಾತ್ ಪ್ರವಾಸದಲ್ಲಿದ್ದಾರೆ. ಎರಡನೇ ದಿನವಾದ ಇಂದು ಅವರು ವಂದೇ ಭಾರತ್ ರೈಲು ಲೋಕಾರ್ಪಣೆ ಮಾಡುವ ಜತೆ, ಸುಮಾರು 7200 ಕೋಟಿ ರೂಪಾಯಿ ವೆಚ್ಚದ ಇನ್ನಿತರ ಕೆಲವು ಯೋಜನೆಗಳನ್ನು ಉದ್ಘಾಟಿಸಿದರು.
ಇಂದು ಗಾಂಧಿನಗರ-ಮುಂಬೈ ಮಾರ್ಗದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಬೆಳಗ್ಗೆ ಸುಮಾರು 10.25ರ ಹೊತ್ತಿಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ, ಇದೇ ರೈಲಿನಲ್ಲಿ ಸಂಚಾರ ಮಾಡಿದರು. ಗಾಂಧಿನಗರದಿಂದ ಕಲುಪುರ್ ರೈಲ್ವೆ ಸ್ಟೇಶನ್ವರೆಗೆ ಅವರು ಪ್ರಯಾಣ ಮಾಡಿದರು. ಈ ವೇಳೆ ಅವರು ರೈಲ್ವೆ ಸಿಬ್ಬಂದಿಯ ಕುಟುಂಬದವರು, ಮಹಿಳಾ ಉದ್ಯಮಿಗಳು, ಯುವಜನರೊಂದಿಗೆ ಮಾತುಕತೆ ನಡೆಸಿದರು. ಪ್ರಧಾನಿ ಮೋದಿ ರೈಲಿನಲ್ಲಿ ಸಾಮಾನ್ಯರಂತೆ ಕುಳಿತು ಪ್ರಯಾಣ ಮಾಡಿದ ಫೋಟೋಗಳನ್ನು ಪ್ರಧಾನಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದೆ.
ಸ್ವದೇಶಿ ನಿರ್ಮಿತ ‘ವಂದೇ ಭಾರತ್’, ಅತ್ಯಂತ ವೇಗವಾಗಿ ಚಲಿಸುವ ರೈಲು. 2019ರಲ್ಲಿ ಭಾರತದಲ್ಲಿ ಪ್ರಾರಂಭವಾದಾಗಿನಿಂದಲೂ ಎರಡೇ ಮಾರ್ಗದಲ್ಲಿ ಸಂಚಾರ ಆಗುತ್ತಿದೆ. ಒಂದು ರೈಲು ದೆಹಲಿಯಿಂದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಮಧ್ಯೆ ಹಾಗೂ ಮತ್ತೊಂದು ದೆಹಲಿ-ವಾರಣಾಸಿ ನಡುವೆ ಸಂಚಾರ ಮಾಡುತ್ತಿದೆ. ಇದೀಗ ಉದ್ಘಾಟನೆಯಾದ ಗಾಂಧಿನಗರ-ಮುಂಬೈ ರೈಲು, ಭಾರತದಲ್ಲಿ 3ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆಗಲಿದೆ.
ಇಂದು ಸಂಜೆ ಪ್ರಧಾನಿ ಮೋದಿ, ಗುಜರಾತ್ನ ಬನಸ್ಕಾಂತ ಜಿಲ್ಲೆಯಲ್ಲಿರುವ ಅಂಬಾಜಿಗೆ ತೆರಳಿ ಅಲ್ಲಿ ಸುಮಾರು 7200 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ನಂತರ ಜನರನ್ನು ಉದ್ದೇಶಿಸಿ ಮಾತನಾಡುವರು. ಬಳಿಕ ಅಂಬೋಜಿ ದೇಗುಲದಲ್ಲಿ ದೇವರಿಗೆ ಆರತಿ ಮಾಡಲಿದ್ದಾರೆ.
ಇದನ್ನೂ ಓದಿ: National Games | ರಾಷ್ಟ್ರಮಟ್ಟದ ಬೃಹತ್ ಕ್ರೀಡಾಕೂಟಕ್ಕೆ ಚಾಲನೆ ಕೊಟ್ಟ ಪ್ರಧಾನಿ ಮೋದಿ