ಭೋಪಾಲ್: ಪ್ರಧಾನಿ ನರೇಂದ್ರ ಮೋದಿ (PM Modi) ಯವರು ಇಂದು ಭೋಪಾಲ್ನ ರಾಣಿ ಕಮಲಪತಿ ರೈಲ್ವೆ ಸ್ಟೇಶನ್ನಿಂದ ಏಕಕಾಲಕ್ಕೆ ಒಟ್ಟು ಐದು ವಂದೇ ಭಾರತ್ ರೈಲುಗಳ (Vande Bharat Express) ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ‘ಭೋಪಾಲ್-ಜಬಲ್ಪುರ್’, ‘ಖಜುರಾಹೊ-ಭೋಪಾಲ್-ಇಂದೋರ್’ ಮಡಗಾಂವ್ (ಗೋವಾ)-ಮುಂಬಯಿ ಮತ್ತು ‘ಧಾರವಾಡ-ಬೆಂಗಳೂರು‘ ಮತ್ತು ‘ಹತಿಯಾ-ಪಾಟ್ನಾ’ ಮಾರ್ಗದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ಇಂದು ಮೋದಿಯವರು ಉದ್ಘಾಟಿಸಿದ್ದಾರೆ. ಭೋಪಾಲ್ ಮಾರ್ಗದ ರೈಲುಗಳಿಗೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದ ಪ್ರಧಾನಿ ಮೋದಿ, ಉಳಿದ ಮಾರ್ಗಗಳ ವಂದೇ ಭಾರತ್ ಎಕ್ಸ್ಪ್ರೆಸ್ ಸಂಚಾರವನ್ನು ವರ್ಚ್ಯುವಲ್ ಆಗಿ ಉದ್ಘಾಟನೆ ಮಾಡಿದ್ದಾರೆ.
Madhya Pradesh | PM Narendra Modi flags off five Vande Bharat trains from Rani Kamlapati Railway Station in Bhopal. pic.twitter.com/7DrfR28LGH
— ANI (@ANI) June 27, 2023
ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಗತಿ ಶಕ್ತಿ ಯೋಜನೆಯ ಭಾಗವಾಗಿ ದೇಶದಲ್ಲಿ ವಂದೇ ಭಾರತ್ ರೈಲುಗಳ ಸಂಚಾರವನ್ನು ಹೆಚ್ಚಿಸಲಾಗುತ್ತಿದೆ. ಇಂದು ಮಡಗಾಂವ್-ಮುಂಬಯಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಇದು ಗೋವಾದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು. ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆಸ್ಟೇಶನ್ನಿಂದ ಗೋವಾದ ಮಡಗಾಂವ್ ರೈಲ್ವೆ ಸ್ಟೇಶನ್ ತಲುಪುತ್ತದೆ. ಅಲ್ಲಿಂದ ಹೊರಟು ಮರಳಿ ಮುಂಬಯಿಗೆ ಬರುತ್ತದೆ. ಈಗಾಗಲೇ ಈ ಎರಡೂ ನಗರಗಳ ಮಧ್ಯೆ ಇರುವ ರೈಲುಗಳಲ್ಲಿ ಪ್ರಯಾಣಿಸಲು ಬೇಕಾದ ಅವಧಿಗಿಂತಲೂ ಒಂದು ತಾಸು ಕಡಿಮೆ ಅವಧಿಯಲ್ಲಿ ಸಂಚಾರ ಮಾಡಬಹುದಾಗಿದೆ. ಇನ್ನು ಇವತ್ತು ಉದ್ಘಾಟಿಸಲ್ಪಟ್ಟ ಹತಿಯಾ-ಪಾಟ್ನಾ ರೈಲು ಜಾರ್ಖಂಡ್ದ ಮೊದಲ ವಂದೇ ಭಾರತ್ ರೈಲಾಗಿದೆ.
ಇದನ್ನೂ ಓದಿ: Vande Bharat Express: ಕರ್ನಾಟಕದ 2ನೇ ವಂದೇ ಭಾರತ್ ರೈಲಿಗೆ ಇಂದು ಮೋದಿ ಹಸಿರು ನಿಶಾನೆ, ಒಟ್ಟು 5 ರೈಲು ಶುರು
ಹಾಗೇ, ಇಂದು ಚಾಲನೆ ಸಿಕ್ಕ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕರ್ನಾಟಕದ ಎರಡನೇ ವಂದೇ ಭಾರತ್ ಟ್ರೇನ್. ಈ ರೈಲು ಧಾರವಾಡ-ಹುಬ್ಬಳ್ಳಿ, ದಾವಣಗೆರೆ ಮಾರ್ಗವಾಗಿ ಬೆಂಗಳೂರನ್ನು ತಲುಪುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲಿಗೆ ಮೋದಿ ಚಾಲನೆ ನೀಡಿದ್ದರು. ಈ ಮೈಸೂರು-ಬೆಂಗಳೂರು-ಚೆನ್ನೈ ರೈಲು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಆಗಿತ್ತು.