ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ ಏಳನೇ ಸಭೆ (NITI Aayog Meet) ನಡೆಯುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಗೆ ಗೈರಾಗಿದ್ದಾರೆ. ಕೊವಿಡ್ 19 ಕಾರಣದಿಂದ 2019ರಿಂದ ಇಲ್ಲಿಯವರೆಗೆ ನೀತಿ ಆಯೋಗದ ಸಭೆಗಳು ವರ್ಚ್ಯುವಲ್ ಆಗಿಯೇ ನಡೆಯುತ್ತಿದ್ದವು. ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭೌತಿಕವಾಗಿ ಸಭೆ ನಡೆಯುತ್ತಿದ್ದು, ಸಂಜೆ 4ಗಂಟೆಗೆ ಮುಕ್ತಾಯಗೊಳ್ಳಲಿದೆ.
ಕೇಂದ್ರ ಸರ್ಕಾರ ತೆಲಂಗಾಣದ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಹಾಗಾಗಿ ಸಭೆಗೆ ಹಾಜರಾಗುವುದಿಲ್ಲ ಎಂದು ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ. ಹಾಗೇ, ನಿತೀಶ್ ಕುಮಾರ್ ಈಗಷ್ಟೇ ಕೊರೊನಾದಿಂದ ಚೇತರಿಸಿಕೊಂಡಿರುವ ಕಾರಣ ಸಭೆಗೆ ಹಾಜರಾಗಲಿಲ್ಲ. ಇನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಆಗಸ್ಟ್ 6ರಂದು ಕೊವಿಡ್ 19 ದೃಢಪಟ್ಟಿದೆ. ಇನ್ನುಳಿದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪಂಜಾಬ್ ಸಿಎಂ ಭಗವಂತ್ ಮಾನ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್ಗಢ್ ಸಿಎಂ ಭೂಪೇಶ್ ಬಾಘೇಲ್ , ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಸೇರಿ, ಬಹುತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಪಾಲ್ಗೊಂಡಿದ್ದಾರೆ. ವಿವಿಧ ಕೇಂದ್ರ ಸಚಿವರೂ ಇದ್ದಾರೆ.
ಎಣ್ಣೆಕಾಳುಗಳು, ಕಾಳು-ದ್ವಿದಳಧಾನ್ಯಗಳ ಬೆಳೆಗಳಲ್ಲಿ ಸ್ವಾವಲಂಬನೆ ಸಾಧಿಸುವುದು, ಕೃಷಿ ಕ್ಷೇತ್ರ ಅಭಿವೃದ್ಧಿ, ಬೆಳೆ ವೈವಿಧ್ಯೀಕರಣ ಸಾಧಿಸುವುದು ಪ್ರಸಕ್ತ ಬಾರಿಯ ಸಭೆಯ ಅಜೆಂಡಾ ಆಗಿದೆ. ನೀತಿ ಆಯೋಗದ ಆಡಳಿತ ಮಂಡಳಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ಗಳು ಮತ್ತು ಹಲವು ಸಚಿವರನ್ನು ಒಳಗೊಂಡಿದೆ. ರಾಜ್ಯಗಳು ಹಾಗೂ ಕೇಂದ್ರದ ನಡುವಿನ ಸಹಯೋಗಕ್ಕೆ ಈ ಬಾರಿಯ ಸಭೆ ಹೊಸ ನಾಂದಿ ಹಾಡಲಿದೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಾಳೆ ನೀತಿ ಆಯೋಗದ 7ನೇ ಸಭೆ