Site icon Vistara News

ಕಿತ್ತಾಟವಿಲ್ಲದೆ ಸ್ಥಳಾಂತರಗೊಂಡ ದರ್ಗಾ; ಕಾಳಿ ಮಾತೆ ದೇಗುಲದ ಗೋಪುರ ಧ್ವಜ ಹಾರಿಸಿದ ಪ್ರಧಾನಿ

PM Modi in Kalika Devi Temple Pavagadh

ಪಂಚಮಹಲ್‌: ದೇಶದ ಅನೇಕ ಕಡೆ ಮಂದಿರ-ಮಸೀದಿ ಕಿತ್ತಾಟ ನಡೆಯುತ್ತಿರುವ ಹೊತ್ತಲ್ಲಿ ಗುಜರಾತ್‌ನ ಪಂಚಮಹಲ್‌ನಲ್ಲಿರುವ ಪಾವಗಡ್‌ ಬೆಟ್ಟದಲ್ಲಿ (Pavagadh Hill) ಕಾಳಿಕಾ ಮಾತಾ ದೇಗುಲದ ಸಂಕೀರ್ಣದಲ್ಲಿದ್ದ ದರ್ಗಾವೊಂದು ಸದ್ದಿಲ್ಲದೆ ಸ್ಥಳಾಂತರಗೊಂಡಿದೆ. ದೇಗುಲ ಮತ್ತು ದರ್ಗಾದ ಆಡಳಿತ ಮಂಡಳಿಯಲ್ಲಿರುವ ಪ್ರಮುಖರು ಕುಳಿತು, ಚರ್ಚಿಸಿ ತುಂಬ ಸೌಹಾರ್ದಯುತವಾಗಿ ಈ ಹೆಜ್ಜೆಯನ್ನಿಟ್ಟಿದ್ದಾರೆ. ದೇಗುಲದವರು ವಿನಯದಿಂದ ಮನವಿ ಮಾಡಿದರು, ದರ್ಗಾದವರು ಅಷ್ಟೇ ಸ್ನೇಹದಿಂದ ಸ್ಥಳಾಂತರಕ್ಕೆ ಒಪ್ಪಿಕೊಂಡರು. ಅಲ್ಲಿಗೆ ಎಲ್ಲವೂ ಇತ್ಯರ್ಥವಾಯಿತು. ದರ್ಗಾ ಸ್ಥಳಾಂತರಗೊಂಡ ನಂತರ ಮಹಾಕಾಳಿ ದೇವಾಲಯವನ್ನು ಮರು ಅಭಿವೃದ್ಧಿ ಮಾಡಲಾಯಿತು. ಹೀಗೆ ನವೀಕರಣಗೊಂಡ ದೇವಳವನ್ನು ಇಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದಾರೆ. ೨ ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಅವರು ದೇಗುಲಕ್ಕೆ ತೆರಳಿ ಕಾಳಿ ಮಾತೆಗೆ ಪೂಜೆ ಸಲ್ಲಿಸಿ, ದೇಗುಲ ಗೋಪುರದ ಮೇಲೆ ಧ್ವಜಾರೋಹಣ ಮಾಡಿದ್ದಾರೆ.

ಈ ಮಹಾಕಾಳಿ ದೇವಸ್ಥಾನ ಪಾವಗಡ್‌ ಬೆಟ್ಟದ ತುತ್ತತುದಿಯಲ್ಲಿ, ಸಮುದ್ರ ಮಟ್ಟದಿಂದ ಸುಮಾರು 762 ಮೀಟರ್‌ ಎತ್ತರದಲ್ಲಿ ಇದೆ. ಸುಮಾರು 10-11ನೇ ಶತಮಾನದ ದೇವಸ್ಥಾನವಿದು. ಈ ಹೊತ್ತಲ್ಲಿ ಇಲ್ಲಿ ಜೈನ ಮಂದಿರಗಳೂ ಇದ್ದವು ಎಂದು incredibleindia.org ವೆಬ್‌ಸೈಟ್‌ನಲ್ಲಿ ಉಲ್ಲೇಖವಿದೆ. ಸುಮಾರು 500 ವರ್ಷಗಳ ಹಿಂದೆ ಈ ಕಾಳಿಕಾ ದೇವಿ ದೇಗುಲದ ಗೋಪುರವನ್ನು ಸುಲ್ತಾನ್‌ ಮಹಮದ್‌ ಬೇಗಡಾ ಎಂಬ ಮುಸ್ಲಿಂ ರಾಜ ನಾಶಗೊಳಿಸಿದ್ದ. ಅದಾದ ಮೇಲೆ ದೇವಸ್ಥಾನದ ಮೇಲೆ ಮುಸ್ಲಿಂ ಸಂತ ಸದನ್‌ಶಾ ಪೀರ್ನ್‌ ಅವರ ದರ್ಗಾವನ್ನು ನಿರ್ಮಿಸಲಾಗಿತ್ತು. ಅದನ್ನೀಗ ಬೇರೆಕಡೆಗೆ ಸ್ಥಳಾಂತರ ಮಾಡಲಾಗಿದೆ. ದೇಗುಲದ ಮೇಲೆ ಚೆಂದನೆಯ ಗೋಪುರ ನಿರ್ಮಾಣವಾಗಿ, ಅದರ ಸೌಂದರ್ಯ ಇಮ್ಮಡಿಯಾಗಿದೆ. ಸುಮಾರು 125 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಲಸಗಳನ್ನು ಮಾಡಲಾಗಿದೆ. ಅಂದಹಾಗೇ, ಈ ದೇವಸ್ಥಾನ ಚಂಪಾನೇರ್‌-ಪಾವಗಡ್‌ ಪುರಾತತ್ವ ಪಾರ್ಕ್‌ನಲ್ಲಿದ್ದು ಯುನೆಸ್ಕೋ ವಿಶ್ವ ಪರಂಪರೆ ತಾಣಗಳಲ್ಲೊಂದು ಇದು. ಪ್ರತಿವರ್ಷ ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್‌ ಮುಖಂಡ; ಕೇಸ್‌ ದಾಖಲು

ಇಂದು ನವೀಕರಣ ದೇಗುಲದ ಮೇಲೆ ಧ್ವಜ ಹಾರಿಸಿದ ಪ್ರಧಾನಿ ಮೋದಿ ಬಳಿಕ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದವು. ಆದರೆ ಈ ಕಾಳಿ ದೇಗುಲದ ಧ್ವಜ ಮಾತ್ರ ಹಾರಾಡಿರಲಿಲ್ಲ. ತುಂಬ ಬೇಸರದ ಸಂಗತಿಯಾಗಿತ್ತು. ಆದರೆ ಇಂದು ತೃಪ್ತಿಯಾಯಿತು. ಲಕ್ಷಾಂತರ ಭಕ್ತರ ಕನಸು ಈಡೇರಿತು ಎಂದು ಹೇಳಿದರು. ದರ್ಗಾವನ್ನು ಸೌಹಾರ್ದಯುತವಾಗಿ ಸ್ಥಳಾಂತರ ಮಾಡಿದ್ದರ ಬಗ್ಗೆಯೂ ಅವರು ಉಲ್ಲೇಖಿಸಿದರು. ಪ್ರಧಾನಿ ನರೇಂದ್ರ ಮೋದಿ, ತಮ್ಮ ತಾಯಿ ಹೀರಾಬೆನ್‌ ಅವರ 100ನೇ ಜನ್ಮದಿನದ ಪ್ರಯುಕ್ತ ಗುಜರಾತ್‌ ಪ್ರವಾಸದಲ್ಲಿದ್ದಾರೆ. ಇಂದು ಮಹಾಕಾಳಿ ದೇವಸ್ಥಾನಕ್ಕೂ ಬರುವುದಕ್ಕಿಂತ ಮೊದಲು ನರೇಂದ್ರ ಮೋದಿ ತಾಯಿಯನ್ನು ಭೇಟಿಯಾಗಿ, ಅವರ ಪಾದಪೂಜೆ ಮಾಡಿ, ಆಶೀರ್ವಾದ ಪಡೆದಿದ್ದಾರೆ.

ಇದನ್ನೂ ಓದಿ: ಅಮ್ಮ ಎಂದರೆ ಕೇವಲ ಪದವಲ್ಲ… ಶತಾಯುಷಿ ತಾಯಿಯ ಜನ್ಮದಿನ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

Exit mobile version