ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ರಾವಣ ಇದ್ದಂತೆ. ಅವರಿಗೂ ರಾವಣನಂತೆ 10 ತಲೆಗಳು ಇವೆ. ನರೇಂದ್ರ ಮೋದಿಯವರ ರಾವಣನ ಸ್ವರೂಪ ಪ್ರತಿ ಚುನಾವಣೆಯಲ್ಲೂ ಗೋಚರವಾಗುತ್ತದೆ ಎಂದು ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಡಿಸೆಂಬರ್ 1ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷದ ವಿರುದ್ಧ ಕಟುವಾಗಿ ವ್ಯಂಗ್ಯ ಮಾಡಿದ ಖರ್ಗೆ, ‘ತಾವು ಸಿಕ್ಕಾಪಟೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಆದರೆ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಮುಖಂಡರು ತಮ್ಮ ಸರ್ಕಾರಗಳ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡದೆ, ಸಮಾಜವನ್ನು ಒಡೆಯುವ, ಸಾಮಾಜಿಕ ಸ್ವಾಸ್ಥ್ಯ, ಕೋಮು ಸೌಹಾರ್ದತೆ ಕದಡುವ ದ್ವೇಷಯುಕ್ತ ಮಾತುಗಳನ್ನಷ್ಟೇ ಆಡುತ್ತಾರೆ’ ಎಂದೂ ಹೇಳಿದರು.
ಗುಜರಾತ್ನ ಪ್ರಮುಖ ರಾಜಕಾರಣಿ, ಬಿಜೆಪಿ ಮಾಜಿ ಸಚಿವ ಜಯನಾರಾಯಣ್ ವ್ಯಾಸ್ ಅವರು ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ವೇಳೆ ಮಲ್ಲಿಕಾರ್ಜುನ್ ಖರ್ಗೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಉಪಸ್ಥಿತರಿದ್ದರು. ಜಯನಾರಾಯಣ್ ಬಿಜೆಪಿ ಸೇರ್ಪಡೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಮಲ್ಲಿಕಾರ್ಜುನ್ ಖರ್ಗೆ, ‘ಕಾಂಗ್ರೆಸ್ ಆಡಳಿತ ನಡೆಸಿದ 70 ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ಮಾರ್ಗಸೂಚಿಯನ್ನು ರಚಿಸಿದೆ. ಆದರೆ ಇತ್ತೀಚೆಗೆ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷಕ್ಕೆ ಗೊತ್ತಿರುವುದೇ ಒಂದು ಭಾಷೆ. ಅದು ಪ್ರತಿಪಕ್ಷಗಳ ವಿರುದ್ಧ ಸದಾ ಆಪಾದನೆ, ಆರೋಪ ಮಾಡುವುದು. ಆ ಪಕ್ಷ ದೇಶವನ್ನು ಮುನ್ನಡೆಸುವ ದೃಷ್ಟಿಕೋನವನ್ನು ಹೊಂದಿಲ್ಲ’ ಎಂದು ಹೇಳಿದ್ದರು.
‘ನಾನು ಗುಜರಾತ್ನ್ನು ಅಭಿವೃದ್ಧಿಪಡಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ನ ಅದೆಷ್ಟೋ ನಾಯಕರು ಇಲ್ಲಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರೂ ಗುಜರಾತ್ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ನರೇಂದ್ರ ಮೋದಿಯವರು ಇದನ್ನೆಲ್ಲ ಹೇಗೆ ಮರೆಯುತ್ತಾರೆ?’ ಎಂದು ಮಲ್ಲಿಕಾರ್ಜುನ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Gujarat Election | ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 125 ಸೀಟು: ಗೆಹ್ಲೋಟ್ ವಿಶ್ವಾಸ