ನವ ದೆಹಲಿ: 26ವರ್ಷದ ಮಹಿಳೆಯ ಗರ್ಭದಲ್ಲಿದ್ದ ಭ್ರೂಣದ ದ್ರಾಕ್ಷಿ ಗಾತ್ರದ ಹೃದಯಕ್ಕೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ ದೆಹಲಿ ಏಮ್ಸ್ ಆಸ್ಪತ್ರೆ ವೈದ್ಯರನ್ನು ಪ್ರಧಾನಿ ನರೇಂದ್ರ ಮೋದಿ (PM Modi)ಶ್ಲಾಘಿಸಿದ್ದಾರೆ. ಅಪರೂಪದಲ್ಲೇ ಅಪರೂಪದ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರನ್ನು ಅಭಿನಂದಿಸಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಟ್ವೀಟ್ ಮಾಡಿದ್ದರು. ಆರೋಗ್ಯ ಸಚಿವರ ಈ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ, ‘ಭಾರತದ ವೈದ್ಯರ ಬಗ್ಗೆ, ಅವರ ದಕ್ಷತೆ ಮತ್ತು ಹೊಸ ಆವಿಷ್ಕಾರದ ಬಗ್ಗೆ ಅತ್ಯಂತ ಹೆಮ್ಮೆ ಎನ್ನಿಸುತ್ತದೆ’ ಎಂದು ಹೇಳಿದ್ದಾರೆ.
ಈ 26ವರ್ಷದ ಮಹಿಳೆ ಏಳು ತಿಂಗಳ ಗರ್ಭಿಣಿ. ಹಿಂದೆ ಎರಡು ಬಾರಿ ಆಕೆಗೆ ಗರ್ಭಪಾತ ಆಗಿತ್ತು. ಈ ಸಲ ಹೊಟ್ಟೆಯಲ್ಲಿರುವ ಮಗುವಿಗೂ ಹೃದಯ ಸಂಬಂಧಿ ಕಾಯಿಲೆ ಇರುವ ಬಗ್ಗೆ ವೈದ್ಯರು ಎಚ್ಚರಿಕೆ ಕೊಟ್ಟಿದ್ದರು. ಆದರೆ ಗರ್ಭಪಾತಕ್ಕೆ ಆಕೆ ಒಪ್ಪಿರಲಿಲ್ಲ. ಅದರ ಬದಲು ಹೊಟ್ಟೆಯಲ್ಲಿದ್ದ ಭ್ರೂಣಕ್ಕೆ ಚಿಕಿತ್ಸೆ ನೀಡುವ, ವೈದ್ಯರ ಸಲಹೆಗೆ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಏಮ್ಸ್ ವೈದ್ಯರು ಕೇವಲ 90 ಸೆಕೆಂಡ್ಗಳಲ್ಲಿ ಭ್ರೂಣಕ್ಕೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮಗು ಹುಟ್ಟಿದ ಬಳಿಕ ಹೃದಯ ಸಂಬಂಧಿ ತೊಂದರೆ ಇರುವುದಿಲ್ಲ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಭಾಷೆಯಲ್ಲಿ ಅದನ್ನು ಬಲೂನ್ ಡಿಲೇಷನ್ ಪ್ರೊಸೀಜರ್ ಎಂದು ಕರೆಯಲಾಗುತ್ತದೆ.
ಏಮ್ಸ್ ವೈದ್ಯರ ಈ ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಟ್ವೀಟ್ ಮಾಡಿ ‘ಏಮ್ಸ್ ವೈದ್ಯರ ತಂಡಕ್ಕೆ ನನ್ನ ಅಭಿನಂದನೆಗಳು. ಆ ತಾಯಿ-ಮಗು ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದರು. ಈ ಟ್ವೀಟ್ನ್ನು ಈಗ ಪ್ರಧಾನಿ ಮೋದಿ ರೀಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ತಾಯಿ ಗರ್ಭದಲ್ಲೇ ಭ್ರೂಣದ ದ್ರಾಕ್ಷಿ ಗಾತ್ರದ ಹೃದಯಕ್ಕೆ 90 ಸೆಕೆಂಡ್‌ನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ!