ಯುನೈಟೆಡ್ ಸ್ಟೇಟ್ಸ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಭಾನುವಾರ ನ್ಯೂಯಾರ್ಕ್ನಲ್ಲಿ, ಭಾರತೀಯ ವಲಸಿಗರ ಜತೆ ಸಂವಾದ ನಡೆಸಿದರು. ಈ ವೇಳೆ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ಒಡಿಶಾ ತ್ರಿವಳಿ ರೈಲು ದುರಂತದ (Odisha Train Accident) ಪ್ರಸ್ತಾಪ ಮಾಡಿದರು. ಇದೇ ವಿಷಯವನ್ನು ಇಟ್ಟುಕೊಂಡು ಬಿಜೆಪಿ, ಆರ್ಎಸ್ಎಸ್ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
‘ಬ್ರಿಟಿಷ್ ಆಳ್ವಿಕೆ ನಂತರ ಕಾಂಗ್ರೆಸ್ ಈ ದೇಶದ ಅಧಿಕಾರ ಹಿಡಿಯಿತು. ಆದರೆ ಈ ಅವಧಿಯಲ್ಲಿ ಆದ ಅವಘಡಗಳಿಗೆ ಯಾವತ್ತೂ ಬ್ರಿಟಿಷರನ್ನು ದೂಷಿಸಲಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಆಗಿದ್ದ ರೈಲು ಅಪಘಾತಗಳಿಗೆ ನಾವು ಬ್ರಿಟಿಷರನ್ನು ಹೊಣೆ ಮಾಡಲಿಲ್ಲ. ಆದರೆ ಬಿಜೆಪಿ-ಆರ್ಎಸ್ಎಸ್ಗಳು ಯಾವತ್ತೂ ಭವಿಷ್ಯದ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಭವಿಷ್ಯವನ್ನು ಕಾಣುವ ಸಾಮರ್ಥ್ಯವೂ ಅವರಲ್ಲಿ ಇಲ್ಲ. ನೀವು ಅವರ ಬಳಿ ಏನನ್ನೇ ಕೇಳಿನೋಡಿ, ಹಿಂದೆ ಆಗಿದ್ದರ ಬಗ್ಗೆಯೇ ಮಾತಾಡುತ್ತಾರೆ. ಒಡಿಶಾ ರೈಲು ದುರಂತ ಯಾಕೆ ಆಯಿತು ಎಂದು ಬಿಜೆಪಿ ಸರ್ಕಾರದ ಬಳಿ ಪ್ರಶ್ನಿಸಿ, ಅವರು ಖಂಡಿತ ಕಾಂಗ್ರೆಸ್ ಬಗ್ಗೆಯೇ ಮಾತಾಡುತ್ತಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ, 50ವರ್ಷಗಳ ಹಿಂದೆಯೇ ಹೀಗಾಗಿದೆ ಎಂಬ ಉತ್ತರ ಕೊಡುತ್ತಾರೆ. ಏನೇ ಪ್ರಶ್ನೆ ಕೇಳಿ ‘ಹಿಂದೆ ನೋಡಿ (ಕಾಂಗ್ರೆಸ್ ಸರ್ಕಾರ ಇದ್ದಾಗಿನ ಸ್ಥಿತಿ ನೋಡಿ)’ ಎಂಬ ಉತ್ತರ ಬಿಜೆಪಿಯವರ ಬಳಿ ಸಿದ್ಧವಾಗಿರುತ್ತದೆ ಎಂದು ಟೀಕಿಸಿದರು.
ಇದನ್ನೂ ಓದಿ: Rahul Gandhi: 2024ರ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ; ರಾಹುಲ್ ಗಾಂಧಿ ಭವಿಷ್ಯ
ಮುಂದುವರಿದು ವ್ಯಂಗ್ಯ ಮಾಡಿದ ರಾಹುಲ್ ಗಾಂಧಿ ‘ನೀವೆಲ್ಲ ನಿಮ್ಮ ಕಾರನ್ನು ಡ್ರೈವ್ ಮಾಡುತ್ತೀರಲ್ಲವಾ? ಇಲ್ಲಿಗೆ ಬರುವಾಗಲೂ ಕಾರಲ್ಲೇ ಬಂದಿರುತ್ತೀರಿ. ಹೀಗೆ ಡ್ರೈವ್ ಮಾಡುವಾಗ ಕಾರಿನ ಮುಂದೆ ನೋಡುವುದನ್ನು ಬಿಟ್ಟು, ಕನ್ನಡಿಯಲ್ಲಿ ಹಿಂಭಾಗ ನೋಡುತ್ತ ಕುಳಿತರೆ ಮುಂದೆ ಅದನ್ನು ಚಲಾಯಿಸಲು ಸಾಧ್ಯವೇ? ಹೀಗೆ ಮಾಡಿದರೆ ಖಂಡಿತ ಅಪಘಾತವಾಗುತ್ತದೆ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಇದೇ ಚಮತ್ಕಾರ ಮಾಡುತ್ತಾರೆ. ಅವರು ಭಾರತೀಯ ಕಾರನ್ನು (ಆಡಳಿತ) ಕನ್ನಡಿಯಲ್ಲಿ ಹಿಂಭಾಗವನ್ನು ನೋಡುತ್ತ ಡ್ರೈವ್ ಮಾಡುತ್ತಿದ್ದಾರೆ. ಆದರೆ ಕಾರು ಅಪಘಾತಕ್ಕೀಡಾಗುತ್ತಿದೆ, ಮುಂದೆ ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ ಎನ್ನುವುದು ಅವರಿಗೆ ಅರ್ಥವಾಗುತ್ತಿಲ್ಲ. ಒಟ್ಟಾರೆ ಬಿಜೆಪಿ-ಆರ್ಎಸ್ಎಸ್ ಕಥೆಯೂ ಇದೆ. ಬಿಜೆಪಿಯ ಸಚಿವರು, ನಾಯಕರು ಆಡುವ ಮಾತುಗಳನ್ನು ಕೇಳಿ, ಅವರೆಂದೂ ನಿಮ್ಮನ್ನು ಭವಿಷ್ಯಕ್ಕೆ ಕರೆದೊಯ್ಯುವುದಿಲ್ಲ’ ಎಂದು ಹೇಳಿದರು.
ಒಡಿಶಾದ ಬಾಲಾಸೋರ್ ಬಳಿ ಶುಕ್ರವಾರ ರಾತ್ರಿ ಮೂರು ರೈಲುಗಳ ಮಧ್ಯೆ ಅಪಘಾತವಾಗಿದ್ದು, 280ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿರ ಜನರು ಗಾಯಗೊಂಡಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಘಟಿಸಿದ ಭೀಕರ ರೈಲು ಅಪಘಾತ ಇದು ಎನ್ನಲಾಗಿದೆ. ಇದೇ ವಿಷಯ ಸದ್ಯ ದೇಶಾದ್ಯಂತ ಚರ್ಚೆಯಲ್ಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿ ವಿಶ್ವದ ಹಲವು ನಾಯಕರು ಭಾರತದಲ್ಲಿ ನಡೆದ ರೈಲು ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಮೃತರಿಗೆ ಸದ್ಗತಿ ಕೋರಿದ್ದಾರೆ. ರಾಹುಲ್ ಗಾಂಧಿ ಯುಎಸ್ನಲ್ಲಿ ನಿಂತು ಒಡಿಶಾ ರೈಲು ದುರಂತವನ್ನು ಪ್ರಸ್ತಾಪಿಸಿ ಬಿಜಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ.