Site icon Vistara News

Mann ki Baat: ಇಂದು ಪ್ರಧಾನಿ ಮೋದಿ ಮನ್​ ಕೀ ಬಾತ್​ 100ನೇ ಆವೃತ್ತಿ ಪ್ರಸಾರ; ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರಪ್ರಸಾರ

PM Modi Mann Ki Baat 100th Episode to be broadcast live in United Nations headquarters

#image_title

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (PM Modi) ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್​ ಕೀ ಬಾತ್​ ನಾಳೆ (Mann Ki Baat) (ಏಪ್ರಿಲ್​ 30)ಗೆ 100ನೇ ಆವೃತ್ತಿ ಪೂರೈಸಲಿದೆ. ಈ ನೂರನೇ ಸಂಚಿಕೆಯ ಮನ್​ ಕೀ ಬಾತ್​​ ಯುಎಸ್​​ನ ನ್ಯೂಯಾರ್ಕ್​​ನಲ್ಲಿರುವ ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರಗೊಳ್ಳಲಿದೆ. ಈ ಮೂಲಕ ಐತಿಹಾಸಿಕ-ಅಭೂತಪೂರ್ವ ಎನ್ನಿಸಿಕೊಳ್ಳಲಿದೆ. ವಿಶ್ವ ಸಂಸ್ಥೆಯ ಭಾರತದ ಶಾಶ್ವತ ಆಯೋಗ ಈ ಬಗ್ಗೆ ಟ್ವೀಟ್ ಮಾಡಿದ್ದು ‘ಯುನ್​​​ ಪ್ರಧಾನ ಕಚೇರಿಯ ಟ್ರಸ್ಟ್​ಶಿಪ್​ ಕೌನ್ಸಿಲ್​ ಚೇಂಬರ್​​ನಲ್ಲಿ ಏಪ್ರಿಲ್​ 30ರಂದು ಪ್ರಧಾನಿ ಮೋದಿಯವರ ಮನ್​ ಕೀ ಬಾತ್​ ನೇರ ಪ್ರಸಾರಗೊಳ್ಳಲಿದೆ’ ಎಂದು ಹೇಳಿದೆ.

2014ರ ಅಕ್ಟೋಬರ್​ 3ರ ವಿಜಯದಶಮಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮನ್​ ಕೀ ಬಾತ್ ಶುರು ಮಾಡಿದ್ದಾರೆ. ಪ್ರತಿ ತಿಂಗಳ ಕೊನೇ ಭಾನುವಾರ ಅವರು ಈ ರೇಡಿಯೊ ಕಾರ್ಯಕ್ರಮದ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಇಲ್ಲಿ ಅವರು ರಾಜಕೀಯದ ವಿಷಯವನ್ನು ಮಾತಾಡುವುದಿಲ್ಲ. ಆರೋಗ್ಯ, ಪರಿಸರ, ನೀರು ರಕ್ಷಣೆ, ಹವಾಮಾನ ವೈಪರೀತ್ಯ, ಸಾಮಾಜಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದ ಸಾಧಕರ ಬಗ್ಗೆ ಜನರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾರೆ. 2014ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಮೋದಿಯವರು ಒಮ್ಮೆಯೂ ಇದನ್ನು ತಪ್ಪಿಸದೆ ನಡೆಸಿಕೊಂಡು ಬಂದಿದ್ದು ವಿಶೇಷ. ಪ್ರಧಾನಿಯೆಂಬ ಘನ ಹುದ್ದೆಯ ಜವಾಬ್ದಾರಿಗಳು, ಪಕ್ಷಕ್ಕೆ ನೀಡಬೇಕಾದ ಗಮನಗಳು, ಪ್ರವಾಸ, ಸಭೆಗಳು ಏನೇ ಇರಲಿ, ಎಷ್ಟೆಲ್ಲ ಕೆಲಸಗಳೇ ಇರಲಿ ಮೋದಿಯವರು ತಮ್ಮನ್ನು ಜನರೊಂದಿಗೆ ನೇರವಾಗಿ ಸಂಪರ್ಕಿಸುವ ಮನ್​ ಕೀ ಬಾತ್​ನ್ನು ಒಮ್ಮೆಯೂ ಬಿಡಲಿಲ್ಲ. ಇಂಥ ಮನ್​ ಕೀ ಬಾತ್​ ಏಪ್ರಿಲ್ 30ರಂದು ನೂರನೇ ಆವೃತ್ತಿಗೆ ಕಾಲಿಡುತ್ತಿರುವುದನ್ನು ಕೇಂದ್ರ ಸರ್ಕಾರ ವಿಶೇಷವಾಗಿ ಸಂಭ್ರಮಿಸುತ್ತಿದೆ ಮತ್ತು ಅದಕ್ಕಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನೂ ನಡೆಸಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಮನ್ ಕಿ ಬಾತ್ ಮೂಲಕ ಭಾರತೀಯರೊಂದಿಗೆ ಮೋದಿ ಕುಶಲೋಪರಿ

ಎಷ್ಟೊತ್ತಿಗೆ ಪ್ರಸಾರ?
ಇಷ್ಟೂ ವರ್ಷದಲ್ಲಿ ಪ್ರತಿತಿಂಗಳ ಕೊನೇ ಭಾನುವಾರ ಬೆಳಗ್ಗೆ 11ಗಂಟೆಗೆ ಮನ್​ ಕೀ ಬಾತ್ ಪ್ರಸಾರವಾಗುತ್ತಿತ್ತು. ಅದರಂತೆ ಈ 100ನೇ ಸಂಚಿಕೆ ಕೂಡ ಏಪ್ರಿಲ್​ 30ರಂದು ಬೆಳಗ್ಗೆ 11ಕ್ಕೆ ಪ್ರಸಾರವಾಗುತ್ತದೆ. ಇದು ನ್ಯೂಯಾರ್ಕ್​​ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರಪ್ರಸಾರಗೊಂಡರೂ, ಅಲ್ಲಿ ಆಗ ತಡರಾತ್ರಿ 1.30 ಆಗಿರುತ್ತದೆ. ಇನ್ನು ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕೀ ಬಾತ್​ನ್ನು ಆಲ್​ ಇಂಡಿಯಾ ರೇಡಿಯೋ ಮತ್ತು ದೂರದರ್ಶನ ನೆಟ್ವರ್ಕ್​​​ನ ಎಲ್ಲ ಚಾನೆಲ್​ಗಳೂ ಪ್ರಸಾರ ಮಾಡುತ್ತವೆ. ಅಷ್ಟೇ ಅಲ್ಲದೆ ಆಲ್​ ಇಂಡಿಯಾ ರೇಡಿಯೋದ ವೆಬ್​ಸೈಟ್​, ನ್ಯೂಸ್​ ಆನ್​ ಏರ್​ ಮೊಬೈಲ್ ಆ್ಯಪ್​ (NewsonAir) ಮೂಲಕವೂ ನೀವು ಮನ್​ ಕೀ ಬಾತ್​ ಆಲಿಸಬಹುದು. ಎಐಆರ್​ ನ್ಯೂಸ್​, ಡಿಡಿ ನ್ಯೂಸ್​, ಪ್ರಧಾನಿ ಕಾರ್ಯಾಲಯ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್​​ಗಳಲ್ಲಿ ಮನ್​ ಕೀ ಬಾತ್​ ಪ್ರಸಾರಗೊಳ್ಳಲಿದೆ. ಖಾಸಗಿ ರೇಡಿಯೊ ಸ್ಟೇಶನ್​ಗಳೂ ಸೇರಿ ಒಟ್ಟು 1000 ರೇಡಿಯೋ ಸ್ಟೇಶನ್​ಗಳಿಂದ ಮನ್​ ಕೀ ಬಾತ್​ ಪ್ರಸಾರವಾಗಲಿದೆ.

ಇದನ್ನೂ ಓದಿ: ವಿಸ್ತಾರ Explainer: Mann ki baat @100 ಪ್ರಧಾನಿ ಮನ್ ಕಿ ಬಾತ್‌ಗೆ ನೂರು, ಕರ್ನಾಟಕದ ಸಾಧನೆಗಳ ಮಾತೇ ಜೋರು!

ಅದರ ಹೊರತಾಗಿ ಈ ಸಲ ದೇಶದ ಪ್ರತಿಯೊಂದು ಲೋಕಸಭೆ ಕ್ಷೇತ್ರದ 100 ಸ್ಥಳಗಳಲ್ಲಿ 100 ಜನ ಕುಳಿತು ಮನ್‌ ಕಿ ಬಾತ್‌ ಕಾರ್ಯಕ್ರಮ ಆಲಿಸಲು ವ್ಯವಸ್ಥೆ ಮಾಡಲು, ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕರು ಹಾಗೂ ಸಮಾಜ ಸೇವಕರು ಕಾರ್ಯಕ್ರಮ ಆಲಿಸಲು, ಹಾಗೆಯೇ, ಪ್ರಧಾನಿ ಮೋದಿ ಅವರು ಇಷ್ಟು ವರ್ಷಗಳ ಮನ್‌ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ ಸಾಧಕರು/ಗಣ್ಯರಿಗೆ ಆಯಾ ರಾಜ್ಯಗಳಲ್ಲೇ ಸನ್ಮಾನ ಮಾಡುವ ಪ್ಲ್ಯಾನ್​ನ್ನೂ ಬಿಜೆಪಿ ರೂಪಿಸಿದೆ.

ಪೂರ್ವಭಾವಿ ಕಾರ್ಯಕ್ರಮಗಳು ಜೋರು!
ಮನ್​ ಕೀ ಬಾತ್​ 100ನೇ ಆವೃತ್ತಿ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅದರ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರ ಹಲವು ವಿಶೇಷ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಿದೆ. 100ನೇ ಸಂಚಿಕೆ ಸ್ಮರಣಾರ್ಥ ಗೃಹ ಸಚಿವ ಅಮಿತ್​ ಶಾ ಅವರು ಏಪ್ರಿಲ್​ 26ರಂದು ಅಂಚೆ ಚೀಟಿ ಬಿಡುಗಡೆ ಮಾಡಿದ್ದರು. ಅಷ್ಟೇ ಅಲ್ಲ, 100 ರೂಪಾಯಿ ನಾಣ್ಯವನ್ನೂ ಅನಾವರಣಗೊಳಿಸಲಾಗಿತ್ತು. ಈ ನಾಣ್ಯ ಚಲಾವಣೆಯ ನಾಣ್ಯವಲ್ಲ. ಚಲಾವಣೆಯಲ್ಲಿರುವ ನಾಣ್ಯಗಳಿಗಿಂತಲೂ ವಿಭಿನ್ನವಾಗಿದೆ. ನಾಲ್ಕು ಲೋಹಗಳಿಂದ ಇದನ್ನು ತಯಾರಿಸಲಾಗಿದ್ದು, 44 ಎಂಎಂ ವ್ಯಾಸ ಹೊಂದಿದೆ. ನಾಣ್ಯದ ಒಂದು ಭಾಗದಲ್ಲಿ ಮನ್​ ಕೀ ಬಾತ್​ 100ನೇ ಸಂಚಿಕೆಯ ಲೋಗೋ ಇದೆ.

ಇದನ್ನೂ ಓದಿ: Mann Ki Baat@100 : ಪ್ರಧಾನಿಯವರ ಮನ್‌ ಕೀ ಬಾತ್‌ ಚಾರಿತ್ರಿಕ ಎಂದು ಪ್ರಶಂಸಿಸಿದ ಬಾಲಿವುಡ್‌ ನಟ ಆಮಿರ್‌ ಖಾನ್

ಏಪ್ರಿಲ್​ 26ರಂದು ದೆಹಲಿಯ ವಿಜ್ಞಾನ ಭವನದಲ್ಲಿ ಮನ್​ ಕೀ ಬಾತ್​@100 ರಾಷ್ಟ್ರೀಯ ಸಮಾವೇಶ ನಡೆದಿತ್ತು. ಅದರಲ್ಲಿ ನಟ ಆಮೀರ್ ಖಾನ್, ನಟಿ ರವೀನಾ ಟಂಡನ್​ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು. ಕೇಂದ್ರ ಸಚಿವರಾದ ಅಮಿತ್ ಶಾ, ಅನುರಾಗ್ ಠಾಕೂರ್​, ಅಶ್ವನಿ ವೈಷ್ಣವ್​ ಇತರರು ಇದ್ದರು. ಇದೇ ಸಮಾವೇಶದಲ್ಲಿಯೇ ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆಗೊಂಡಿದೆ. ಅಷ್ಟೇ ಅಲ್ಲ, ಇಷ್ಟು ವರ್ಷದಲ್ಲಿ ಮೋದಿಯವರು ಮನ್​ ಕೀ ಬಾತ್​ನಲ್ಲಿ 700 ಸಾಧಕರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರಲ್ಲಿ 100 ಮಂದಿ ಆಯ್ದ ಗಣ್ಯರನ್ನು ಕೂಡ ಈ ರಾಷ್ಟ್ರೀಯ ಸಮಾವೇಶಕ್ಕೆ ಆಹ್ವಾನಿಸಲಾಗಿತ್ತು.

ಪ್ರಧಾನಿ ಮೋದಿಗೆ ಗೇಟ್ಸ್​ ಅಭಿನಂದನೆ
ಮನ್​ ಕೀ ಬಾತ್​ 100ನೇ ಸಂಚಿಕೆ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಉದ್ಯಮಿ ಬಿಲ್​ ಗೇಟ್ಸ್​ ಅವರು ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಬಿಲ್ ಗೇಟ್ಸ್​ ‘ನೈರ್ಮಲ್ಯ, ಆರೋಗ್ಯ, ಮಹಿಳಾ ಆರ್ಥಿಕ ಸಬಲೀಕರಣ ಮತ್ತು ಇತರ ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿಕೊಡುವ ಮನ್​ ಕೀ ಬಾತ್​ ರೇಡಿಯೋ ಕಾರ್ಯಕ್ರಮ ಬೆಳಕು ಚೆಲ್ಲಿದೆ ಎಂದಿದ್ದಾರೆ.

ಮೋದಿ ಕರ್ನಾಟಕದಲ್ಲಿದ್ದಾರೆ
ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕೀ ಬಾತ್​ ಒಂದು ರೆಕಾರ್ಡೆಡ್ ಕಾರ್ಯಕ್ರಮ. ನಾಳೆ 100ನೇ ಆವೃತ್ತಿ ಪ್ರಸಾರ ಆಗುವ ವೇಳೆ ಪ್ರಧಾನಿ ನರೇಂದ್ರ ಕರ್ನಾಟಕದಲ್ಲೇ ಇರುತ್ತಾರೆ ಎಂಬುದು ವಿಶೇಷ. ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ತ ಮತಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು (ಏಪ್ರಿಲ್​ 29) ಕರ್ನಾಟಕಕ್ಕೆ ಬಂದಿದ್ದಾರೆ. ಅವರು ಏಪ್ರಿಲ್ 30ರಂದು ಕೂಡ ಇಲ್ಲೇ ಇದ್ದು, ಪ್ರಚಾರ ಮುಂದುವರಿಸಲಿದ್ದಾರೆ.

ಇದನ್ನೂ ಓದಿ: Mann Ki Baat: ಮೋದಿ ಮನ್‌ ಕಿ ಬಾತ್‌ಗೆ ಕಿವಿಯಾಗಲಿದೆ ಜಗತ್ತು, 100ನೇ ಆವೃತ್ತಿ ಹಿನ್ನೆಲೆ ಬಿಜೆಪಿ ಬಿಗ್ ಪ್ಲಾನ್‌ ಏನು?

Exit mobile version