ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (PM Modi) ಮನ್ ಕೀ ಬಾತ್ ರೇಡಿಯೊ ಕಾರ್ಯಕ್ರಮ(Mann Ki Baat)ದ 100ನೇ ಸಂಚಿಕೆ ಇಂದು ಪ್ರಸಾರವಾಗುತ್ತಿದೆ (Mann Ki Baat 100). ನರೇಂದ್ರ ಮೋದಿಯವರು ರಾಜಕೀಯೇತರ ವಿಷಯಗಳನ್ನು ಮಾತನಾಡಲು, ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು 2014ರಲ್ಲಿ ಶುರು ಮಾಡಿದ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಇಂದಿಗೆ ಶತಕ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಅತ್ಯಂತ ವಿಶೇಷವಾಗಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ರೆಕಾರ್ಡ್ ಆಗುವ (ಧ್ವನಿ ಮುದ್ರಣಗೊಳ್ಳುವ) ಕೊಠಡಿಯ ವಿಡಿಯೊ ತುಣುಕನ್ನೂ ಕೂಡ ಬಿಡುಗಡೆ ಮಾಡಲಾಗಿದೆ.
‘ಅದೊಂದು ವಿಶಾಲವಾದ ಕೊಠಡಿ. ಅಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಾರೆ. ಅಲ್ಲಿರುವ ತಾಂತ್ರಿಕ ವಿಭಾಗದ ಸಿಬ್ಬಂದಿಯೊಂದಿಗೆ ಮೊದಲು ಮಾತುಕತೆ ನಡೆಸಿ, ಧ್ವನಿ ಮುದ್ರಣ ಮಾಡಬೇಕಾದ ರೂಮ್ಗೆ ಹೋಗುತ್ತಾರೆ. ಅಲ್ಲಿ ಕುರ್ಚಿಯ ಮೇಲೆ ಕುಳಿತು, ಎದುರಿನ ಮೇಜ್ ಮೇಲೆ ಇದ್ದ ಮೈಕ್ನಲ್ಲಿ ಮಾತನಾಡಲು ಪ್ರಾರಂಭ ಮಾಡುತ್ತಾರೆ. ಆ ರೆಕಾರ್ಡಿಂಗ್ ರೂಮ್ ದೊಡ್ಡದಾಗಿದೆ. ಪ್ರಧಾನಿ ಮೋದಿಯವರು ಕುಳಿತುಕೊಳ್ಳುವ ಕುರ್ಚಿಯ ಹಿಂದೆ ಎರಡು ದೊಡ್ಡದಾದ ರಾಷ್ಟ್ರಧ್ವಜಗಳನ್ನು ಇಡಲಾಗಿದ್ದನ್ನು ವಿಡಿಯೊದಲ್ಲಿ ನೀವು ಕಾಣುತ್ತೀರಿ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಮೋದಿ ಕೈಯಲ್ಲಿ ಯಾವುದೇ ಒಂದು ನೋಟ್ ಕೂಡ ಇಲ್ಲ, ಸ್ಕ್ರಿಪ್ಟ್ ನೋಡಿ ಓದುವುದೂ ಇಲ್ಲ. ಅತ್ಯಂತ ಸಹಜವಾಗಿ ಅವರು ಮಾತನಾಡುತ್ತ ಹೋಗುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಮನ್ ಕೀ ಬಾತ್ನ 100ನೇ ಸಂಚಿಕೆಯಲ್ಲಿ ಮಾತನಾಡಿದ್ದಾರೆ. ಈ ಕಾರ್ಯಕ್ರಮ ತಮ್ಮ ಪಾಲಿಗೆ ವ್ರತವಿದ್ದಂತೆ ಎಂದು ಹೇಳಿಕೊಂಡಿದ್ದಾರೆ. ಹಾಗೇ, ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಸಾಧಿಸಲು ಸಾಧ್ಯ ಮಾಡಿಕೊಟ್ಟಿದ್ದು ಇದೇ ಮನ್ ಕೀ ಬಾತ್ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ‘ಮನ್ ಕೀ ಬಾತ್ ಒಂದು ಮಹತ್ವದ ಪಯಣ’ ಎಂದಿದ್ದರು.
ಇದನ್ನೂ ಓದಿ: Mann ki Baat: ಇಂದು ಪ್ರಧಾನಿ ಮೋದಿ ಮನ್ ಕೀ ಬಾತ್ 100ನೇ ಆವೃತ್ತಿ ಪ್ರಸಾರ; ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರಪ್ರಸಾರ