ಬೆಂಗಳೂರು: ಇಂದು ಮನ್ ಕೀ ಬಾತ್‌ನಲ್ಲಿ (Mann Ki Baat) ಪ್ರಧಾನಿ ನರೇಂದ್ರ ಮೋದಿ (PM Modi) ಅವರು ‘ಚಾಮರಾಜನಗರದ ಕೊಳ್ಳೇಗಾಲದ ಕವಿ ಬಾಳಗುಣಸೆ ಮಂಜುನಾಥ್’ ಅವರ ಹೆಸರನ್ನು ಪ್ರಸ್ತಾಪಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದ ಪ್ರಯುಕ್ತ ಆಚರಿಸುವ ಏಕತಾ ದಿವಸ ನಿಮಿತ್ತ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಲಾಲಿ ಹಾಡು ಸ್ಪರ್ಧೆಯಲ್ಲಿ ಕವಿ ಬಿ.ಎಂ.ಮಂಜುನಾಥ್ ಪ್ರಥಮ ಬಹುಮಾನ ಪಡೆದಿದ್ದಾರೆ ಎಂದು ಪ್ರಧಾನಿ ಮೋದಿ ಇಂದಿನ ಮನ್ ಕೀ ಬಾತ್‌ನಲ್ಲಿ ಘೋಷಿಸಿದ್ದಾರೆ. ಇನ್ನು ಏಕತಾ ದಿನದ ನಿಮಿತ್ತ ರಂಗೋಲಿ ಮತ್ತು ದೇಶಭಕ್ತಿ ಗೀತೆ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಅದರಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಪಂಜಾಬ್ನ ಕಮಲ್ ಸಿಂಗ್ ಎಂಬುವರು ಮತ್ತು ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಆಂಧ್ರಪ್ರದೇಶದ ವಿಜಯದುರ್ಗಾ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಬಿ.ಎಂ. ಮಂಜುನಾಥ್ ಅವರು ‘ಮಲಗು ಕಂದ, ಮಲಗು ಕೂಸೆ’ ಎಂಬ ಜೋಗುಳಗೀತೆಯನ್ನು ಬರೆದಿದ್ದಾರೆ. ಇಂದು ನರೇಂದ್ರ ಮೋದಿಯವರು ಈ ಹಾಡಿನ ಕೆಲವು ಸಾಲುಗಳನ್ನು ಹೇಳುವ ಮೂಲಕ ಕವಿ ಮಂಜುನಾಥ್ಗೆ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಹಾಗೇ, ಹಾಡಿನ ಬಗ್ಗೆ ಅತ್ಯಂತ ಪ್ರಶಂಸನೀಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: Mann Ki Baat: ಇ ಸಂಜೀವಿನಿ ಆ್ಯಪ್, ಯುಪಿಐ ಕುರಿತು ಮನ್ ಕಿ ಬಾತ್‌ನಲ್ಲಿ ಮೋದಿ ಮೆಚ್ಚುಗೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕವಿ ಬಾಳಗುಣಸೆ ಮಂಜುನಾಥ್ ‘ನಾನು ಬರೆದ ಲಾಲಿಹಾಡನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕೀ ಬಾತ್‌ನಲ್ಲಿ ಪ್ರಸ್ತುತಪಡಿಸುತ್ತಾರೆ ಎಂದು ಕನಸು-ಮನಸಲ್ಲೂ ಎಣಿಸಿರಲಿಲ್ಲ. ಪ್ರಥಮ ಬಹುಮಾನ ಬರುತ್ತದೆ ಎಂದೂ ಅಂದುಕೊಂಡಿರಲಿಲ್ಲ. ಮೋದಿಯವರ ಪ್ರಶಂಸೆಯಿಂದ ನನಗೆ ಸಿಕ್ಕಾಪಟೆ ಖುಷಿಯಾಗಿದೆ. ಈಗ ನನ್ನ ಅಮ್ಮ ಇರಬೇಕಿತ್ತು. ಅವರೂ ತುಂಬ ಖುಷಿಪಡುತ್ತಿದ್ದರು ಎಂದು ಹೇಳಿದರು.