ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚರಾಸ್ತಿ 26 ಲಕ್ಷ ರೂಪಾಯಿ (PM Modi Assets) ಏರಿಕೆಯಾಗಿದೆ. 2021ರ ಮಾರ್ಚ್ ತಿಂಗಳಲ್ಲಿ 1,97,68,885 ರೂಪಾಯಿ ಇದ್ದ ಆಸ್ತಿ ಮೌಲ್ಯ 2022ರ ಮಾರ್ಚ್ 31ರ ಹೊತ್ತಿಗೆ 2,23,82,504ಕ್ಕೆ ಏರಿಕೆಯಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. ಗುಜರಾತ್ನಲ್ಲಿ ತಮ್ಮ ಹೆಸರಿನಲ್ಲಿ ಇದ್ದ ಒಂದು ಸಣ್ಣ ವಸತಿ ಭೂಮಿಯನ್ನೂ ಅವರು ದಾನ ಮಾಡಿದ್ದಾರೆ. ಅದಾದ ಮೇಲೆ ಅವರ ಬಳಿ ಯಾವುದೇ ಸ್ಥಿರಾಸ್ಥಿಯೂ ಉಳಿದಿಲ್ಲ ಎಂದೂ ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ನಲ್ಲಿ ಆಸ್ತಿ ಘೋಷಣೆ ಮಾಡುವಾಗ, ತಮ್ಮ ಬಳಿ ಇರುವ ವಸತಿ ನಿವೇಶನ 2002ರಲ್ಲಿ ಖರೀದಿಸಿದ್ದು. ಒಟ್ಟು 1.10 ಕೋಟಿ ರೂಪಾಯಿ ಬೆಲೆಬಾಳುತ್ತದೆ ಎಂದು ಹೇಳಿದ್ದರು. ಅಂದಹಾಗೇ, ಈ ಭೂಮಿ ಕೂಡ ಪ್ರಧಾನಿ ಮೋದಿ ಒಬ್ಬರಿಗೇ ಸೇರಿದ್ದಾಗಿರಲಿಲ್ಲ. ನರೇಂದ್ರ ಮೋದಿ ಸೇರಿ ಒಟ್ಟು ನಾಲ್ವರ ಪಾಲು, ತಲಾ 25 ಪರ್ಸೆಂಟ್ನಂತೆ ಇದ್ದು, ಜಂಟಿ ಮಾಲೀಕತ್ವದಲ್ಲಿತ್ತು. ಸರ್ವೇ ನಂಬರ್ 401/ಎ ನಲ್ಲಿ ಇದ್ದ ಈ ಭೂಮಿಯನ್ನೀಗ ದಾನ ಮಾಡಿರುವುದರಿಂದ ಮೋದಿಯವರ ಬಳಿ ಸ್ಥಿರಾಸ್ತಿ ಉಳಿದಿಲ್ಲ ಎಂದು ಪಿಎಂಒ ವೆಬ್ಸೈಟ್ನಲ್ಲಿ ಉಲ್ಲೇಖವಾಗಿದೆ.
ಹಾಗೇ, ಪ್ರಧಾನಿ ಮೋದಿ ಅವರ ಕೈಯಲ್ಲಿರುವ ನಗದು 35,250 ರೂಪಾಯಿಗೆ ಇಳಿದಿದೆ. ಕಳೆದ ವರ್ಷ ಈ ಮೊತ್ತ 36,900 ರೂ ಇತ್ತು. ಬ್ಯಾಂಕ್ನಲ್ಲಿರುವ ಹಣದ ಮೊತ್ತವೂ 1,52,480 ರೂಪಾಯಿಯಿಂದ 46,555ರೂ.ಗೆ ಇಳಿಕೆಯಾಗಿದೆ. ನರೇಂದ್ರ ಮೋದಿಯವರು ಯಾವುದೇ ಬಾಂಡ್, ಶೇರು, ಮ್ಯುಚ್ಯುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿಲ್ಲ. ಅವರ ಬಳಿ ಸ್ವಂತ ವಾಹನಗಳೂ ಇಲ್ಲ. 1.73 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳು ಇವೆ ಎಂದು ಉಲ್ಲೇಖವಾಗಿದೆ. ಹಾಗೇ, ಅಂಚೆಕಚೇರಿಯಲ್ಲಿ ಅವರು 9,05,105 ರೂ.ಉಳಿತಾಯ ಮಾಡಿದ್ದು, 1,89,305 ರೂ. ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: 2024ರ ಚುನಾವಣೆಯಲ್ಲೂ ನರೇಂದ್ರ ಮೋದಿಯವರೇ ಪ್ರಧಾನಿ ಅಭ್ಯರ್ಥಿ: ಗೃಹ ಸಚಿವ ಅಮಿತ್ ಶಾ