ನವ ದೆಹಲಿ: ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದ ನಿಮಿತ್ತ, ಅವರಿಗೆ ಗೌರವಾರ್ಥವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ 21 ದೊಡ್ಡದೊಡ್ಡ ದ್ವೀಪಗಳಿಗೆ ಪ್ರಧಾನಿ ನರೇಂದ್ರ ಮೋದಿ ನಾಮಕರಣ ಮಾಡಿದರು. ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು 2021ರಿಂದ ಪರಾಕ್ರಮ ದಿವಸ್ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಲದ ಪರಾಕ್ರಮ ದಿವಸ್ (Parakram Diwas 2023)ನಿಮಿತ್ತ ಅಂಡಮಾನ್-ನಿಕೋಬಾರ್ನಲ್ಲಿನ 21 ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ನಾಮಕರಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚ್ಯುವಲ್ ಆಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಅಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ (ಈ ಹಿಂದಿನ ರಾಸ್ ದ್ವೀಪಗಳು)ದಲ್ಲಿ ನಿರ್ಮಿಸಲಾಗಿರುವ ಸುಭಾಷ್ ಚಂದ್ರ ಬೋಸ್ ಅವರ ರಾಷ್ಟ್ರೀಯ ಸ್ಮಾರಕದ ಮಾದರಿ ಪ್ರತಿಮೆಯನ್ನೂ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಜನಮಾನಸದಿಂದ ಮರೆಯಾಗಿಸುವ ಪ್ರಯತ್ನವೂ ನಡೆಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಈ 21ನೇ ಶತಮಾನದಲ್ಲೂ ಜನರು ನೇತಾಜಿ ಸುಭಾಷ್ ಚಂದ್ರ ಬೋಸ್ರನ್ನು ಜನ ಪ್ರತಿಕ್ಷಣ ಸ್ಮರಿಸುತ್ತಿದ್ದಾರೆ’ ಎಂದು ಹೇಳಿದರು. ‘ನೇತಾಜಿ ಅವರಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ದೇಶದ ಎದುರು ಬಹಿರಂಗಪಡಿಸಬೇಕು ಎಂಬ ಬೇಡಿಕೆ ದಶಕಗಳಿಂದಲೂ ಇತ್ತು. ಅದನ್ನು ನಾವು ಅತ್ಯಂತ ಶ್ರದ್ಧೆಯಿಂದ ಮಾಡಿದ್ದೇವೆ ಮತ್ತು ಈ ವಿಚಾರವಾಗಿ ಇನ್ನಷ್ಟು ಕೆಲಸ ಮುಂದುವರಿದಿದೆ ಎಂದೂ ಪ್ರಧಾನಿ ತಿಳಿಸಿದರು. 21 ದ್ವೀಪಗಳಿಗೆ ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಕೂಡ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಅಂಡಮಾನ್-ನಿಕೋಬಾರ್ನ 21 ದ್ವೀಪಗಳಿಗೆ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರು; ಜ.23ರಂದು ಪ್ರಧಾನಿಯಿಂದ ನಾಮಕರಣ
ಯಾರೆಲ್ಲರ ಹೆಸರು ಇಡಲಾಗಿದೆ?
ಮಿಲಿಟರಿ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ ಪರಮವೀರ ಚಕ್ರ ಪ್ರಶಸ್ತಿಗೆ ಭಾಜನರಾದ ಯೋಧರ ಹೆಸರನ್ನೇ ಅಂಡಮಾನ್-ನಿಕೋಬಾರ್ನಲ್ಲಿದ್ದ ಎಲ್ಲ 21 ದ್ವೀಪಗಳಿಗೆ ಇಡಲಾಗಿದೆ. ಈ 21 ದ್ವೀಪಗಳಲ್ಲೇ ಅತ್ಯಂತ ದೊಡ್ಡ ದ್ವೀಪಕ್ಕೆ ಮೇಜರ್ ಸೋಮನಾಥ್ ಶರ್ಮಾ ಹೆಸರು ಇಡಲಾಗಿದೆ. ಇವರು ಮೊಟ್ಟಮೊದಲು ಈ ಪುರಸ್ಕಾರ ಪಡೆದವರು. . 1947ರ ನವೆಂಬರ್ 3ರಂದು ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ನುಸುಳುಕೋರರನ್ನು ಹಿಮ್ಮೆಟ್ಟಿಸುವಾಗ ಅವರು ಹುತಾತ್ಮರಾದರು. ಹಾಗೇ, ಇನ್ನುಳಿದಂತೆ, ‘ಸುಬೇದಾರ್ ಮತ್ತು ಲ್ಯಾನ್ಸ್ ನಾಯಕ್ ಕರಮ್ ಸಿಂಗ್, ಲೆಫ್ಟಿನೆಂಟ್ ರಾಮಾ ರಘೋಬಾ ರಾಣೆ, ನಾಯಕ್ ಜಡುನಾಥ್ ಸಿಂಗ್, ಕಂಪನಿ ಹವಿಲ್ದಾರ್ ಮೇಜರ್ ಪಿರು ಸಿಂಗ್, ಕ್ಯಾಪ್ಟನ್ ಜಿ.ಎಸ್.ಸಲಾರಿಯಾ, ಲೆಫ್ಟಿನೆಂಟ್ ಕರ್ನಲ್ ಧನ್ ಸಿಂಗ್ ಥಾಪಾ, ಸುಬೇದಾರ್ ಜೋಗಿಂದರ್ ಸಿಂಗ್, ಮೇಜರ್ ಶೈತಾನ್ ಸಿಂಗ್, ಸಿಕ್ಯೂಎಂಎಚ್ ಅಬ್ದುಲ್ ಹಮೀದ್, ಲೆಫ್ಟಿನೆಂಟ್ ಕರ್ನಲ್ ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್, ಲ್ಯಾನ್ಸ್ ನಾಯಕ್ ಅಲ್ಬರ್ಟ್ ಎಕ್ಕಾ, ಮೇಜರ್ ಹೋಶಿಯಾರ್ ಸಿಂಗ್, ಲೆಫ್ಟಿನೆಂಟ್ ಅರುಣ್ ಕ್ಷೇತ್ರಪಾಲ್, ಫ್ಲೈಯಿಂಗ್ ಆಫೀಸರ್ ನಿರ್ಮಲ್ಜಿತ್ ಸಿಂಗ್ ಸೇಖೋನ್, ಮೇಜರ್ ರಾಮಸ್ವಾಮಿ ಪರಮೇಶ್ವರನ್, ನಾಯಬ್ ಸುಬೇದಾರ್ ಬನಾ ಸಿಂಗ್ ಬಾನಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಭಾತ್ರಾ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಸುಬೇದಾರ್ ಮೇಜರ್ ಸಂಜಯ್ ಕುಮಾರ್, ಸುಬೇದಾರ್ ಮೇಜರ್ ಯೋಗೇಂದ್ರ ಸಿಂಗ್ ಯಾದವ್ ಅವರ ಹೆಸರುಗಳನ್ನು ಇಡಲಾಗಿದೆ.
ರಾಷ್ಟ್ರಮಟ್ಟದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ