ಡೆಹ್ರಾಡೂನ್: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಉತ್ತರಾಖಂಡಕ್ಕೆ ತೆರಳಿದ್ದಾರೆ. ಅವರು ಎರಡು ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದು, ಕೇದಾರನಾಥ ಮತ್ತು ಬದರಿನಾಥದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ/ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಮುಖವಾಗಿ 9.7 ಕಿಮೀ ಉದ್ದದ ಗೌರಿಕುಂಡ-ಕೇದಾರನಾಥ ರೋಪ್ವೇ, ಹಿಂದು ಯಾತ್ರಾಸ್ಥಳಗಳಾದ ರಿಷಿಕೇಶ, ಜೋಶಿಮಠ್, ಬದ್ರಿನಾಥವನ್ನು ಡೆಹ್ರಾಡೂನ್ ಮತ್ತು ಚಂಡಿಗಢ್ ಜತೆ ಸಂಪರ್ಕಿಸುವಂತೆ ವಿಸ್ತರಣೆ ಮಾಡಲಾಗಿರುವ ರಾಷ್ಟ್ರೀಯ ಹೆದ್ದಾರಿ 7 ನ್ನು, ಪ್ರಯಾಗ್ರಾಜ್ನಿಂದ ಗೌರಿಕುಂಡದವರೆಗೆ ವಿಸ್ತರಿಸಲಾದ ರಾಷ್ಟ್ರೀಯ ಹೆದ್ದಾರಿ 107ನ್ನು ಪ್ರಧಾನಿ ಮೋದಿ ಉದ್ಘಾಟಿಸುವರು.
ಪ್ರಧಾನಿ ನರೇಂದ್ರ ಮೋದಿ ಭೇಟಿ ನಿಮಿತ್ತ ಕೇದಾರನಾಥ ಮತ್ತು ಬದರಿನಾಥ ದೇಗುಲಗಳು ಭರ್ಜರಿಯಾಗಿ ಅಲಂಕೃತಗೊಂಡಿವೆ. ಎಲ್ಲ ರೀತಿಯ ಭದ್ರತಾ ಸಿದ್ಧತೆಗಳನ್ನೂ ಮಾಡಲಾಗಿದೆ. ಇಂದು ಮುಂಜಾನೆ ಅವರು ಕೇದಾರನಾಥ ದೇಗುಲಕ್ಕೆ ಮೊದಲು ಭೇಟಿಕೊಟ್ಟು, ಶ್ರೀ ಶಂಕರಾಚಾರ್ಯ ಸಮಾಧಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಕೇದಾರನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಅವರು ಹಿಮಾಚಲಿ ಸಾಂಪ್ರದಾಯಿಕ ಚೋಲಾ ಡೋರಾ ಉಡುಪು ಧರಿಸಿ ಗಮನ ಸೆಳೆದರು.
ಇಂದು ನರೇಂದ್ರ ಮೋದಿ ಧರಿಸಿದ ಉಡುಗೆಯನ್ನು ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಮಹಿಳೆಯರು ಕೈಯಲ್ಲೇ ನೇಯ್ಗೆ ಮಾಡಿದ್ದಾಗಿದ್ದು, ಇತ್ತೀಚೆಗೆ ಮೋದಿ ಹಿಮಾಚಲ ಪ್ರದೇಶಕ್ಕೆ ಹೋದಾಗ ಅವರಿಗೆ ಉಡುಗೊರೆಯನ್ನಾಗಿ ನೀಡಿದ್ದರು. ನಾನು ಅತ್ಯಂತ ಶೀತ ಪ್ರದೇಶಕ್ಕೆ ಯಾವಾಗ ಹೋಗುತ್ತೇನೋ, ಅಂದು ಈ ಉಡುಪನ್ನು ಧರಿಸುತ್ತೇನೆ ಎಂದು ಆ ಮಹಿಳೆಯರಿಗೆ ಪ್ರಧಾನಿ ಅಂದು ಹೇಳಿದ್ದರು. ಅದರಂತೆ ಇಂದು ಅವರು ಉತ್ತರಾಖಂಡಕ್ಕೆ ಹೋಗುವಾಗ ಈ ಉಡುಪಿನಲ್ಲೇ ತೆರಳಿದ್ದರು.
ಬದರಿನಾಥದಲ್ಲಿ ಬಿಗಿ ಭದ್ರತೆ
ಪ್ರಧಾನಿ ಮೋದಿಯವರು ಕೇದಾರನಾಥದಿಂದ ಬೆಳಗ್ಗೆ 11.30ರ ಹೊತ್ತಿಗೆ ಬದರಿನಾಥಕ್ಕೆ ತೆರಳಲಿದ್ದಾರೆ. ಅಲ್ಲಿ ಕೂಡ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬದರಿನಾಥದಲ್ಲಿ ನಡೆಯುತ್ತಿರುವ ವಿವಿಧ ನಿರ್ಮಾಣ ಕಾಮಗಾರಿಯನ್ನೂ ವೀಕ್ಷಿಸಲಿದ್ದಾರೆ.
ಇದನ್ನೂ ಓದಿ: Narendra Modi | ಗುಜರಾತ್‌ನಲ್ಲಿ ಮಕ್ಕಳ ಜತೆ ಬೆಂಚ್ ಮೇಲೆ ಕುಳಿತು ಪಾಠ ಆಲಿಸಿದ ಪ್ರಧಾನಿ ಮೋದಿ