ನವ ದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 66ನೇ ಪರಿನಿರ್ವಾಣ (ಪುಣ್ಯತಿಥಿ) ದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ತಿನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಗೌರವ ಸಮರ್ಪಿಸಿದರು. ಪ್ರಧಾನಿಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭಾ ಸ್ಪೀಕರ್ ಓಂಬಿರ್ಲಾ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಕೂಡ ಇದ್ದು, ಅವರೂ ಡಾ. ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿದರು.
ಫೋಟೋ ಶೇರ್ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣದ ದಿನ ಇಂದು. ಅವರು ಈ ದೇಶಕ್ಕೆ ಸಲ್ಲಿಸಿರುವ ಸೇವೆ ಮಾದರಿ. ಭಾರತಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಹೋರಾಟ ಲಕ್ಷಾಂತರ ಜನರಲ್ಲಿ ಭರವಸೆ ಮೂಡಿಸಿತ್ತು. ಅದನ್ನೆಲ್ಲ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ’ ಎಂದು ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಅವರು 1981ರಲ್ಲಿ ಮಧ್ಯಪ್ರದೇಶದ ಮಾವೋದಲ್ಲಿ ಜನಿಸಿದರು. ಅಂಬೇಡ್ಕರ್ ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರು. ಇವರು ಬಾಲ್ಯದಿಂದಲೂ ಅಸ್ಪೃಶ್ಯತೆ ಅನುಭವಿಸಿ, ನಂತರ ಅದರ ವಿರುದ್ಧ ಹೋರಾಟ ನಡೆಸಿದರು. ಅರ್ಥಶಾಸ್ತ್ರಜ್ಞ, ರಾಜಕಾರಣಿಯಾಗಿದ್ದರು. ಸಾಮಾಜಿಕ ತಾರತಮ್ಯದ ವಿರುದ್ಧ ಗಟ್ಟಿಯಾಗಿ ನಿಂತು, ಮಹಿಳೆಯರು-ಶ್ರಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಇವರು 1956ರ ಡಿಸೆಂಬರ್ 6ರಂದು ನಿಧನರಾಗಿದ್ದಾರೆ. ಡಾ.ಅಂಬೇಡ್ಕರ್ ಅವರು ಬೌದ್ಧ ಧರ್ಮಾನುಯಾಯಿ ಆಗಿದ್ದರಿಂದ ಅವರ ಪುಣ್ಯ ತಿಥಿಯನ್ನು ಮಹಾಪರಿನಿರ್ವಾಣ ದಿನ ಎಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: Voter Data | ಅಂಬೇಡ್ಕರ್ ಚುನಾವಣೆ ಬೇಕೆ, ಗೋಡ್ಸೆ ಚುನಾವಣೆ ಬೇಕೆ ಎಂದು ಆಯೋಗವೇ ನಿರ್ಧರಿಸಲಿ: ಸಿ.ಎಂ. ಇಬ್ರಾಹಿಂ