ನವ ದೆಹಲಿ: ಕಳೆದ 4ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರನೊಬ್ಬ ನಡೆಸಿದ್ದ ಆತ್ಮಾಹುತಿ ದಾಳಿ (Pulwama Attack)ಯಲ್ಲಿ ಭಾರತೀಯ ಸೇನೆಯ 40 ಯೋಧರು ದುರ್ಮರಣಹೊಂದಿದ್ದು, ಭಾರತದ ಇತಿಹಾಸದಲ್ಲಿ ಸದಾ ಕರಾಳ ನೆನೆಪಾಗಿಯೇ ಉಳಿಯಲಿದೆ. 2019ರ ಫೆಬ್ರವರಿ 14ರಂದು ಈ ದುರ್ಘಟನೆ ನಡೆದಿತ್ತು. ಸಿಆರ್ಪಿಎಫ್ ಯೋಧರು ಪ್ರಯಾಣ ಮಾಡುತ್ತಿದ್ದ ಬಸ್ವೊಂದಕ್ಕೆ ಉಗ್ರ ತನ್ನ ಮಾರುತಿ ಇಕೊ ಕಾರನ್ನು ಡಿಕ್ಕಿಹೊಡೆಸಿದ್ದ. ಆ ಕಾರಿನಲ್ಲಿ ಸುಧಾರಿತ ಸ್ಫೋಟಕ ಸಾಧನ ಇದ್ದಿದ್ದರಿಂದ ಕ್ಷಣ ಮಾತ್ರದಲ್ಲಿ ಬಸ್ ಸ್ಫೋಟಗೊಂಡಿತ್ತು. ಅದರಲ್ಲಿದ್ದ ಸೈನಿಕರ ದೇಹ ಛಿದ್ರವಾಗಿತ್ತು.
ಪುಲ್ವಾಮಾ ದಾಳಿ ಘಟನೆ ನಡೆದು 4ವರ್ಷಗಳು ಕಳೆದ ಬೆನ್ನಲ್ಲೇ, ದೇಶದೆಲ್ಲೆಡೆ ಹುತಾತ್ಮ ಯೋಧರನ್ನು ಸ್ಮರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಪುಲ್ವಾಮಾ ಘಟನೆಯನ್ನು ಮೆಲುಕು ಹಾಕಿ, ಅಂದು ಮೃತಪಟ್ಟ ಯೋಧರನ್ನು ಪರಾಕ್ರಮಿ ವೀರರು ಎಂದು ಉಲ್ಲೇಖಿಸಿ, ಗೌರವ ಸಲ್ಲಿಸಿದ್ದಾರೆ. ‘ಪುಲ್ವಾಮಾ ದಾಳಿಯಲ್ಲಿ ಜೀವ ಚೆಲ್ಲಿದ ಎಲ್ಲ ಯೋಧರಿಗೆ ನಮನ. ಅವರ ಮಹೋನ್ನತ ಬಲಿದಾನವನ್ನೆಂದಿಗೂ ನಾವು ಮರೆಯುವುದಿಲ್ಲ. ಬಲಿಷ್ಠ ಮತ್ತು ಅಭಿವೃದ್ಧಿಯುತ ಭಾರತ ನಿರ್ಮಾಣಕ್ಕೆ ಅವರ ಬಲಿದಾನ ಸದಾ ಸ್ಫೂರ್ತಿ’ ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: ಜರಾ ಯಾದ್ ಕರೋ ಕುರ್ಬಾನಿ… ಪುಲ್ವಾಮಾ ದಾಳಿಗೆ 4 ವರ್ಷ, ಹುತಾತ್ಮರ ನೆನೆಯೋಣ, ಶೌರ್ಯ ಸ್ಮರಿಸೋಣ
ಪುಲ್ವಾಮಾ ದಾಳಿಗೆ ಭಾರತ ಈಗಾಗಲೇ ತಿರುಗೇಟು ಕೊಟ್ಟಿದೆ. ದಾಳಿ ನಡೆದ 12ನೇ ದಿನಕ್ಕೆ ಪಾಕಿಸ್ತಾನದ ಬಾಲಾಕೋಟ್ನ ಜಾಬಾ ಟಾಪ್ನಲ್ಲಿದ್ದ ಜೈಷೆ ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ನಿಖರವಾಗಿ ಗೊತ್ತಿಲ್ಲವಾದರೂ, ಅಲ್ಲಿ ಸುಮಾರು 300 ಮಂದಿ ಮೂಲಭೂತವಾದಿಗಳು ಇದ್ದರು ಎನ್ನಲಾಗಿದೆ.