ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್ನ (Mann Ki Baat) 102ನೇ ಆವೃತ್ತಿಯಲ್ಲಿ ಮಾತನಾಡಿದರು. ಸಾಮಾನ್ಯವಾಗಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಪ್ರತಿ ತಿಂಗಳ (PM Modi Mann Ki Baat) ಕೊನೇ ಭಾನುವಾರ ಪ್ರಸಾರವಾಗುತ್ತದೆ. ಆದರೆ ಈ ಸಲ ಮೂರನೇ ಭಾನುವಾರವೇ ಅಂದರೆ ಒಂದು ವಾರ ಮುಂಚಿತವಾಗಿಯೇ ಮನ್ ಕೀ ಬಾರ್ ಟೆಲಿಕಾಸ್ಟ್ ಆಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಪ್ರಧಾನಿ ಮೋದಿ ಮನ್ ಕೀ ಬಾತ್ ಪ್ರಾರಂಭದಲ್ಲೇ ಹೇಳಿದರು.
ತಾವು ಮುಂದಿನ ವಾರ ಅಮೆರಿಕ ಪ್ರವಾಸದಲ್ಲಿ ಇರುವುದರಿಂದ ಒಂದು ವಾರ ಮೊದಲೇ ಮನ್ ಕೀ ಬಾತ್ ಪ್ರಸಾರ ಆಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ‘ನಾನು ಮುಂದಿನ ವಾರ ಅಮೆರಿಕದಲ್ಲಿ ಇರುತ್ತೇನೆ. ಹೀಗೆ ಅಮೆರಿಕ ಪ್ರವಾಸಕ್ಕೆ ಹೋಗುವುದಕ್ಕೂ ಮೊದಲೇ ದೇಶದ ಜನರೊಂದಿಗೆ ‘ಮನ್ ಕೀ ಬಾತ್’ ಮೂಲಕ ಮಾತಾಡುವುದು ಒಳ್ಳೆಯದು ಎಂದು ನನಗೆ ಅನ್ನಿಸಿತು. ಈ ಮಾತುಗಳನ್ನು ಕೇಳಿ ನನ್ನನ್ನು ನೀವು ಹರಸಿ, ಆಶೀರ್ವದಿಸಿದರೆ ಅದು ನನಗೆ ಶಕ್ತಿ ಕೊಡುತ್ತದೆ’ ಎಂದು ಪ್ರಧಾನಿ ಹೇಳಿದರು.
ತುರ್ತು ಪರಿಸ್ಥಿತಿ ಸಂದರ್ಭ ನೆನಪಿಸಿಕೊಂಡ ಪ್ರಧಾನಿ ಮೋದಿ
ಇಂದು ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ಪ್ರಾರಂಭದಲ್ಲಿ ‘ತುರ್ತು ಪರಿಸ್ಥಿತಿ’ ಯನ್ನು ನೆನಪಿಸಿಕೊಂಡಿದ್ದಾರೆ. 1975ರ ಜೂನ್ 25ರಂದು, ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ಹೇರಿದ್ದ ಎಮರ್ಜನ್ಸಿ ಪ್ರಸ್ತಾಪ ಮಾಡಿದ ಅವರು, ‘ಜೂನ್ 25 ನಮ್ಮ ದೇಶದ ಇತಿಹಾಸದಲ್ಲಿ ಯಾವತ್ತಿಗೂ ಕರಾಳ ದಿನವಾಗಿಯೇ ಉಳಿದುಕೊಳ್ಳುತ್ತಿದೆ. ಇಂದು ನಾವು ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಲೆಯಲ್ಲಿ ಅಮೃತಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನಾವು ನಮ್ಮ ಇತಿಹಾಸದಲ್ಲಿ ಆಗಿಹೋದ ಪ್ರಮಾದವನ್ನು ನೆನಪಿಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯವನ್ನೇ ಕಿತ್ತುಕೊಂಡ ಆ ಕ್ಷಣ ಎಂದಿಗೂ ಕರಾಳದಿನವೇ ಆಗಿರುತ್ತದೆ. ಆ ದಿನವನ್ನು ನೆನಪಿಸಿಕೊಳ್ಳುವ ಮೂಲಕ ಇಂದಿನ ಯುವಜನರು, ಪೀಳಿಗೆಯವರು ಪ್ರಜಾಪ್ರಭುತ್ವದ ಮಹತ್ವ ಅರಿತುಕೊಳ್ಳಬೇಕು. ಅಂದು 1975ರಲ್ಲಿ ಅಂದಿನ ಪ್ರಧಾನಿ ತುರ್ತು ಪರಿಸ್ಥಿತಿ ಹೇರುವಾಗ ಲಕ್ಷಾಂತರ ಜನರು ವಿರೋಧಿಸಿದ್ದರು’ ಎಂದು ಪ್ರಧಾನಿ ಮೋದಿ ಹೇಳಿದರು.
ಎಲ್ಲರೂ ಯೋಗ ಮಾಡಿ
ಜೂ.21 ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಯೋಗದ ಮಹತ್ವದ ಬಗ್ಗೆ ಇಂದಿನ ಮನ್ ಕೀ ಬಾತ್ನಲ್ಲಿ ತಿಳಿಸಿದರು. ಈ ಬಾರಿಯ ಯೋಗ ದಿನದ ಥೀಮ್ ಏನು ಎಂಬುದನ್ನೂ ಹೇಳಿದರು. ‘ಈ ಸಲ ‘ವಸುಧೈವ ಕುಟುಂಬಕಂ’ ಎಂಬ ಥೀಮ್ನಡಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲ್ಪಡುತ್ತದೆ. ಅಂದರೆ ಒಂದು ವಿಶ್ವ-ಒಂದು ಕುಟುಂಬ ಎಂಬ ಮನೋಭಾವದಡಿ, ಇಡೀ ಜಗತ್ತಿನ ಆರೋಗ್ಯಕ್ಕಾಗಿ ಯೋಗ ಎಂಬ ಆಶಯದೊಂದಿಗೆ ಯೋಗ ದಿನ ನಡೆಯುತ್ತದೆ’ ಎಂದು ತಿಳಿಸಿದರು. ಎಲ್ಲರೂ ಯೋಗ ಮಾಡುವಂತೆ ಕರೆ ಕೊಟ್ಟರು.
ಇದನ್ನೂ ಓದಿ: Mann Ki Baat: ಮೋದಿಯವರ ಮನ್ ಕೀ ಬಾತ್ ಒಂದು ಎಪಿಸೋಡ್ಗೆ 8.3 ಕೋಟಿ ರೂ.ವೆಚ್ಚ?; ವೈರಲ್ ಸಂದೇಶ ನಿಜವೇ?
ನೀರು ಸಂರಕ್ಷಣೆಗೆ ಒತ್ತು ಕೊಡಿ
ಗುಜರಾತ್ ಕರಾವಳಿಯಲ್ಲಿ ಅಬ್ಬರಿಸಿ, ಹಾನಿ ಮಾಡಿದ ಬಿಪರ್ ಜಾಯ್ ಚಂಡಮಾರುತ, ಮಳೆಯ ಬಗ್ಗೆ ಮಾತನಾಡಿದ ನರೇಂದ್ರ ಮೋದಿ, ಗುಜರಾತ್ ಕರಾವಳಿ ಜನರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ನೀರು ಸಂರಕ್ಷಣೆಯ ಪ್ರಾಮುಖ್ಯತೆ ಸಾರಿದರು. ಉತ್ತರ ಪ್ರದೇಶದ, ಹಾಪುರ ಜಿಲ್ಲೆಯ ಜನರೆಲ್ಲ ಒಟ್ಟಾಗಿ, ಅಳಿವಿನಂಚಿನಲ್ಲಿರುವ ನದಿಯನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ. ಇಡೀ ದೇಶದ ಜನರು ಈ ಕಾಯಕಕ್ಕೆ ಮುಂದಾಗಬೇಕು. ತಮ್ಮತಮ್ಮ ಪ್ರದೇಶದಲ್ಲಿ ನೀರು ಸಂರಕ್ಷಣೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.