Site icon Vistara News

New Parliament: ಹೊಸ ಸಂಸತ್​ ಭವನದ ವಿಡಿಯೊ ಹಂಚಿಕೊಂಡು, ವಿಶೇಷ ಮನವಿ ಮಾಡಿದ ಪ್ರಧಾನಿ ಮೋದಿ

PM Modi Shares Video Of New Parliament

#image_title

ನೂತನ ಸಂಸತ್​ ಭವನ (New Parliament) ಉದ್ಘಾಟನೆಗೆ ಇನ್ನೊಂದೇ ದಿನ ಬಾಕಿ ಇದೆ. ಮೇ 28ರಂದು ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಈ ಸಂಸತ್​ ಭವನವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ, ನೂತನ ಸಂಸತ್​ ಭವನದ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೇ, ‘ಈ ಹೊಸ ಸಂಸತ್​ ಭವನ ಎಂಬುದು ಪ್ರತಿಯೊಬ್ಬ ಭಾರತೀಯನ ಪಾಲಿಗೆ ಹೆಮ್ಮೆಯಾಗಿದೆ. ನಾನಿಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ನೀವು ಈ ಐಕಾನಿಕ್​ ಕಟ್ಟಡದ ಒಂದು ಕ್ಷಣಿಕ ದರ್ಶನ ಪಡೆಯಬಹುದು. ಇದೇ ವೇಳೆ ನಾನೊಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ನೀವೆಲ್ಲ ಈ ವಿಡಿಯೊಗಳನ್ನು ನಿಮ್ಮದೇ ವೈಸ್​ ಓವರ್​ ಕೊಟ್ಟು ಹಂಚಿಕೊಳ್ಳಿ. ಸಂಸತ್​ ಭವನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ. #MyParliamentMyPride ಎಂಬ ಹ್ಯಾಷ್​ಟ್ಯಾಗ್ ಬಳಸಿ. ನಾನೂ ನಿಮ್ಮ ಟ್ವೀಟ್​​ಗಳನ್ನು ರೀಟ್ವೀಟ್ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: New Parliament: ನೂತನ ಸಂಸತ್‌ ಭವನ ಉದ್ಘಾಟನೆ ಬಹಿಷ್ಕಾರಕ್ಕೆ ಸೆಡ್ಡು ಹೊಡೆದ ಎಚ್‌.ಡಿ. ದೇವೇಗೌಡರು: ತೆರಳಲು ನಿರ್ಧಾರ

ಹೊಸ ಕಟ್ಟಡ ಸಂಕೀರ್ಣದಲ್ಲಿರುವ ಶಾಸಕಾಂಗ ಸಭೆಗಳು ಭವ್ಯವಾಗಿವೆ. ಲೋಕಸಭೆಯು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಆಕೃತಿಯಲ್ಲಿದೆ. ಇಲ್ಲಿ ಪ್ರಸ್ತುತಕ್ಕಿಂತ ಮೂರು ಪಟ್ಟು ಆಸನ ಸಾಮರ್ಥ್ಯವಿದೆ. 888 ಸೀಟುಗಳಿವೆ. ರಾಜ್ಯಸಭೆಯ ವಿನ್ಯಾಸ ರಾಷ್ಟ್ರೀಯ ಹೂವು ಕಮಲದ ಆಕೃತಿಯಲ್ಲಿದ್ದು, 348 ಆಸನಗಳು ಇರುತ್ತವೆ. ಲೋಕಸಭೆಯ ಸಭಾಂಗಣವು ಜಂಟಿ ಅಧಿವೇಶನಗಳಿಗೆ ಅನುಕೂಲವಾಗುವಂತೆ 1,272 ಆಸನಗಳಿಗೆ ಅವಕಾಶ ಕಲ್ಪಿಸುತ್ತದೆ.

ಹೊಸ ಸಂಕೀರ್ಣವು “ಪ್ಲಾಟಿನಂ-ರೇಟೆಡ್ ಹಸಿರು ಕಟ್ಟಡ”. ಇದು “ಸುಸ್ಥಿರ ಅಭಿವೃದ್ಧಿಯ ಕಡೆಗೆ ಭಾರತದ ಬದ್ಧತೆʼʼ. ದೇಶದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಅನೇಕ ಪ್ರಾದೇಶಿಕ ಕಲಾಕೃತಿಗಳೂ ಇಲ್ಲಿ ಇರುತ್ತವೆ. ಹೊಸ ಸಂಕೀರ್ಣವನ್ನು ಅಂಗವಿಕಲರಿಗೆ ಓಡಾಡಲು ಕಷ್ಟವಾಗದಂತೆ ವಿನ್ಯಾಸಗೊಳಿಸಲಾಗಿದೆ. ಮಧ್ಯದಲ್ಲಿ ತೆರೆದ ಅಂಗಣಕ್ಕೆ ಪೂರಕವಾಗಿ ಕೇಂದ್ರದಲ್ಲಿ ವಿಶ್ರಾಂತಿ ಕೋಣೆಯನ್ನು ಹೊಂದಿದೆ. ಇಲ್ಲಿ ಸಂಸತ್‌ ಸದಸ್ಯರು ಇತರರ ಜತೆಗೆ ಸಂವಹನ ನಡೆಸಬಹುದು. ಈ ತೆರೆದ ಅಂಗಣದಲ್ಲಿ ರಾಷ್ಟ್ರೀಯ ಮರವಾದ ಆಲದ ಮರ ಕೂಡ ಇದೆ.

Exit mobile version