Site icon Vistara News

ಪ್ರಧಾನಿ ಮೋದಿ ಸಿಕ್ಕಾಪಟೆ ಶಾಕ್​ ಆಗಿದ್ದಾರೆ, ಸಂಸತ್ತಿನಲ್ಲಿ ನನ್ನ ಯಾವ ಪ್ರಶ್ನೆಗೂ ಉತ್ತರಿಸಿಲ್ಲ ಎಂದ ರಾಹುಲ್ ಗಾಂಧಿ

Karnataka Election

Karnataka Election

ನವ ದೆಹಲಿ: ಬಜೆಟ್​ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ್ದ ಭಾಷಣದ ಮೇಲಿನ ನಿರ್ಣಯದ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಫೆ.8ರಂದು ಲೋಕಸಭೆಯಲ್ಲಿ ಉತ್ತರ ನೀಡಿ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಸದ್ಯ ಅದಾನಿ ಸಮೂಹದ ಷೇರು ಕುಸಿತದ ವಿಷಯವನ್ನೇ ಇಟ್ಟುಕೊಂಡು ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಜೆಟ್​ ಅಧಿವೇಶನದಲ್ಲಿ ಕೂಡ ಅದಾನಿ ಬಗ್ಗೆಯೇ ಗದ್ದಲ ಎಬ್ಬಿಸುತ್ತಿದ್ದಾರೆ. ಮಂಗಳವಾರ ಸಂಸತ್ತಿನಲ್ಲಿ ಮಾತನಾಡಿದ್ದ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ (Rahul Gandhi), ಗೌತಮ್ ಅದಾನಿ ಮತ್ತು ಪ್ರಧಾನಿ ಮೋದಿ ಜತೆಗಿರುವ ಫೋಟೋ ಪ್ರದರ್ಶಿಸಿ ‘ಇವರಿಬ್ಬರ ಮಧ್ಯೆ ಇರುವ ಸಂಬಂಧ ಎಂಥದ್ದು?’ ಎಂದು ಪ್ರಶ್ನಿಸಿದ್ದರು. ಆದರೆ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಬುಧವಾರ ಮಾತನಾಡುವಾಗ ಅದಾನಿ ಬಗ್ಗೆ ಒಂದೇ ಒಂದು ಮತು ಕೂಡ ಆಡಿರಲಿಲ್ಲ.

ಬುಧವಾರ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಾತು ಮುಗಿಯುತ್ತಿದ್ದಂತೆ ರಾಹುಲ್​ ಗಾಂಧಿ ಮತ್ತೆ ಈ ವಿಷಯವನ್ನು ಎತ್ತಿದ್ದಾರೆ. ‘ಅದಾನಿ ವಿಚಾರವಾಗಿ ನಾನು ಕೇಳಿದ ಯಾವುದೇ ಪ್ರಶ್ನೆಗಳಿಗೂ ಪ್ರಧಾನಿಯವರು ಉತ್ತರ ನೀಡಲಿಲ್ಲ. ಅವರು ತೀವ್ರವಾಗಿ ಶಾಕ್​ ಆಗಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ‘ಅದಾನಿಯವರ ಬಗ್ಗೆ ಒಂದೇ ಒಂದು ಮಾತನ್ನೂ ಮೋದಿಯವರು ಆಡಿಲ್ಲ. ಅವರನ್ನು ರಕ್ಷಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಬುಧವಾರ ಲೋಕಸಭೆಯಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ‘ನರೇಂದ್ರ ಮೋದಿಯವರು ಅದೆಷ್ಟು ಶಾಕ್​ ಆಗಿದ್ದಾರೆ ಎಂದರೆ, ನಾವೆಲ್ಲ ಕೇಳಿರುವ ಒಂದೇ ಒಂದು ಪ್ರಶ್ನೆಗೂ ಉತ್ತರಿಸಲಿಲ್ಲ. ನಾನಂತೂ ಯಾವುದೇ ಕಷ್ಟಕರ ಪ್ರಶ್ನೆಯನ್ನಂತೂ ಕೇಳಿಲ್ಲ. ಅದಾನಿಯವರ ಜತೆ ನೀವೆಷ್ಟು ಬಾರಿ ಪ್ರಯಾಣ ಮಾಡಿದ್ದೀರಿ? ಅವರನ್ನು ಎಷ್ಟು ಸಲ ಭೇಟಿಯಾಗಿದ್ದೀರಿ? ಎಂಬ ಪ್ರಶ್ನೆಯನ್ನಷ್ಟೇ ನಾನು ಕೇಳಿದ್ದು. ಸರಳವಾದ ಪ್ರಶ್ನೆಗಳೇ ಇದ್ದರೂ ಪ್ರಧಾನಿ ಮೋದಿ ಉತ್ತರ ನೀಡಲಿಲ್ಲ’ ಎಂದು ಹೇಳಿದರು.

ರಾಹುಲ್​ ಗಾಂಧಿಯವರು ಮಂಗಳವಾರ ಲೋಕಸಭೆಯಲ್ಲಿ 53 ನಿಮಿಷಗಳ ಕಾಲ ಮಾತನಾಡಿದ್ದರು. ಇಡೀ ಭಾಷಣದಲ್ಲಿ ಅದಾನಿ ಮತ್ತು ಪ್ರಧಾನಿ ಮೋದಿಯವರ ಬಗ್ಗೆಯೇ ಮಾತಾಡಿದ್ದರು. ಮೋದಿಯವರು ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಅದಾನಿ ಜತೆಗೆ ನಂಟಿತ್ತು. ಮೋದಿ ಪ್ರಧಾನಿಯಾದ ಮೇಲೆ ಅದಾನಿ ಆಸ್ತಿ ಹೆಚ್ಚಾಯ್ತು ಎಂಬಿತ್ಯಾದಿ ಆರೋಪಗಳನ್ನು ಮಾಡಿದ್ದರು. ಪ್ರತಿಪಕ್ಷಗಳ ಹಲವು ನಾಯಕರು ಇದೇ ವಿಷಯ ಇಟ್ಟುಕೊಂಡು ಮೋದಿಯವರ ವಿರುದ್ಧ ಆರೋಪಿಸಿದ್ದರು. ಆದರೆ ಪ್ರಧಾನಿ ಮೋದಿ ಈ ವಿಚಾರದಲ್ಲಿ ಮೌನವಾಗಿಯೇ ಇದ್ದಾರೆ.

Exit mobile version