ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಜಿ20 ಶೃಂಗಸಭೆ (G20 Summit)ಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ. ಸೋಮವಾರ (ನವೆಂಬರ್ 14)ಸಂಜೆಯೇ ಅವರು ಬಾಲಿಯನ್ನು ತಲುಪಿದ್ದಾರೆ. ಇಂದು ಬೆಳಗ್ಗೆ ಶೃಂಗಸಭೆಗೆ ತೆರಳಿದ ಅವರನ್ನು ಇಂಡೋನೇಷಿಯಾದ ಅಧ್ಯಕ್ಷ ಜೋಕೊ ವಿಡೋಡೋ ಸ್ವಾಗತಿಸಿದರು. ಅಂದಹಾಗೇ, ಈ ಶೃಂಗಸಭೆಯಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್, ಯುಕೆ ಪ್ರಧಾನಿ ರಿಶಿ ಸುನಕ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಭಾಗವಹಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೈರಾಗಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವರ್ಚ್ಯುವಲ್ ಆಗಿ ಪಾಲ್ಗೊಂಡಿದ್ದಾರೆ. ಇನ್ನು ಜೋ ಬೈಡೆನ್ ಅವರಂತೂ ಮೋದಿಯವರನ್ನು ಕಾಣುತ್ತಿದ್ದಂತೆ ಬಂದು ಆತ್ಮೀಯತೆಯಿಂದ ಅಪ್ಪಿಕೊಂಡಿದ್ದಾರೆ.
ಬಳಿಕ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮೊಟ್ಟಮೊದಲು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದರು. ‘ಉಕ್ರೇನ್ನಲ್ಲಿ ಕದನ ವಿರಾಮ ಸೃಷ್ಟಿಸಿ, ರಾಜತಾಂತ್ರಿಕತೆ ಮರುಸ್ಥಾಪಿಸಲು ನಾವೆಲ್ಲ ಸೇರಿ ಹಾದಿ ಕಂಡುಕೊಳ್ಳಬೇಕು. ಈ ಹಿಂದೆ ವಿಶ್ವಯುದ್ಧಗಳು ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿದವು. ವಿನಾಶ ಉಂಟು ಮಾಡಿದವು. ಅದಾದ ಮೇಲೆ ಅಂದಿನ ವಿಶ್ವ ನಾಯಕರು ಶಾಂತಿಪಥದಲ್ಲಿ ಸಾಗಲು ಗಂಭೀರವಾಗಿ ಚಿಂತನೆ ನಡೆಸಿ, ಅದೇ ಮಾರ್ಗದಲ್ಲಿ ನಡೆದರು. ಈಗ ನಮ್ಮ ಸರದಿ’ ಎಂದು ಪ್ರಧಾನಿ ಮೋದಿ ಹೇಳಿದರು.
ಕೊವಿಡ್ 19ನಿಂದ ಅನೇಕ ಸಮಸ್ಯೆಗಳು ಆಗಿವೆ. ಈಗ ಕೊವಿಡ್ 19 ಸಾಂಕ್ರಾಮಿಕದ ನಂತರ ಹೊಸ ಜಗತ್ತನ್ನು ಕಟ್ಟುವ ಹೊಣೆಗಾರಿಕೆ ನಮ್ಮೆಲ್ಲರ ಹೆಗಲ ಮೇಲಿದೆ. ಶಾಂತಿ, ಸಾಮರಸ್ಯ, ಭದ್ರತೆಯ ಸಂಕಲ್ಪ ತೊಡುವುದು ನಮ್ಮ ಆದ್ಯತೆಯಾಗಬೇಕು. ಈಗ ಬುದ್ಧನ ನಾಡಿನಲ್ಲಿ ಜಿ20 ಶೃಂಗಸಭೆ ನಡೆಯುತ್ತಿದೆ, ಮುಂದೆ ಮಹಾತ್ಮ ಗಾಂಧಿಯ ನೆಲದಲ್ಲಿ ಆಯೋಜನೆಗೊಳ್ಳಲಿದೆ. ಹೀಗಿರುವಾಗ ನಾವೆಲ್ಲ ಸೇರಿ ಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರುತ್ತೇವೆ ಎಂಬ ನಂಬಿಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಆಹಾರ ಸರಪಳಿ ನಿರ್ವಹಣೆ
ಇಂದು ರಸಗೊಬ್ಬರದ ಕೊರತೆ ಕಾಡುತ್ತಿದೆ. ಅದೇ ಮುಂದೆ ಆಹಾರದ ಬಿಕ್ಕಟ್ಟಾಗಿ ಪರಿಣಮಿಸಲಿದೆ. ಹಾಗೊಮ್ಮೆ ಇಡೀ ವಿಶ್ವದಾದ್ಯಂತ ಆಹಾರ ಬಿಕ್ಕಟ್ಟು ಉಂಟಾದರೆ, ಅದಕ್ಕೊಂದು ಪರಿಹಾರವೇ ಇಲ್ಲದಂತಾಗುತ್ತದೆ. ಗೊಬ್ಬರ ಮತ್ತು ಆಹಾರ ಧಾನ್ಯಗಳ ಪೂರೈಕೆ ಸರಪಳಿಯನ್ನು ಸ್ಥಿರವಾಗಿ ನಿರ್ವಹಿಸಲು ನಾವು ಪರಸ್ಪರ ಒಪ್ಪಂದ ಮಾಡಿಕೊಳ್ಳಬೇಕು ಎಂದೂ ಹೇಳಿದರು.
ಭಾರತದಲ್ಲಿ ಸುಸ್ಥಿರ ಆಹಾರ ಭದ್ರತೆಗಾಗಿ ನಾವು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದ್ದೇವೆ. ಸಿರಿಧಾನ್ಯಗಳಂಥ ಪೌಷ್ಟಿಕ ಮತ್ತು ಸಾಂಪ್ರದಾಯಿಕ ಆಹಾರ ಧಾನ್ಯಗಳನ್ನು ಮತ್ತೆ ಜನಪ್ರಿಯಗೊಳಿಸುತ್ತಿದ್ದೇವೆ. ಸಿರಿಧಾನ್ಯಗಳು ಜಾಗತಿಕವಾಗಿ ಹಸಿವು ಮತ್ತು ಅಪೌಷ್ಟಿಕತೆಯನ್ನು ದೂರ ಮಾಡಬಲ್ಲವು. ಈ ನಿಟ್ಟಿನಲ್ಲಿ ಬರುವ ವರ್ಷದಿಂದ ನಾವೆಲ್ಲರೂ ಅಂತಾರಾಷ್ಟ್ರೀಯ ಸಿರಿಧಾನ್ಯ ದಿನವನ್ನು ಉತ್ಸಾಹದಿಂದ ಆಚರಣೆ ಮಾಡಬೇಕು ಎಂದು ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಹೇಳಿದರು.
ವಿಶ್ವದಲ್ಲಿ ಆರ್ಥಿಕತವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಭಾರತ. ಇದರ ಜಾಗತಿಕ ಅಭಿವೃದ್ಧಿಗೆ ದೇಶದಲ್ಲಿನ ಇಂಧನ ಭದ್ರತೆಯೂ ಪ್ರಮುಖ ಕಾರಣ. ನಾವು ಇಂಧನ ಪೂರೈಕೆ ಮೇಲೆ ಯಾವುದೇ ನಿರ್ಬಂಧ ಹೇರಬಾರದು. ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕು. ಇದಕ್ಕೆ ಭಾರತ ಬದ್ಧವಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, 2030ರ ವೇಳೆಗೆ ನಮ್ಮ ಅರ್ಧದಷ್ಟು ವಿದ್ಯುತ್ನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುತ್ತದೆ ಎಂದೂ ಹೇಳಿದರು.
ಇದನ್ನೂ ಓದಿ: Nehru Birth Anniversary | ನೆಹರುಗೆ ಪ್ರಧಾನಿ ಮೋದಿ, ಸೋನಿಯಾ, ಖರ್ಗೆ, ದೇವೇಗೌಡ ನಮನ