Site icon Vistara News

ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ; ’ದುಷ್ಟರನ್ನು ಸುಮ್ಮನೆ ಬಿಡುವುದಿಲ್ಲ’ ಎಂದ ಪ್ರಧಾನಿ ಮೋದಿ

PM Modi

ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾಗಿ ಎರಡು ತಿಂಗಳು ಆದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಣಿಪುರದಲ್ಲಿ ಎರಡು ತಿಂಗಳುಗಳಿಂದಲೂ ಮೈತೈ ಮತ್ತು ಕುಕಿ ಸಮುದಾಯಗಳ ಮಧ್ಯೆ ಗಲಾಟೆ ನಡೆಯುತ್ತಲೇ ಇದೆ. ಇಡೀ ಮಣಿಪುರ ಹೊತ್ತಿ ಉರಿಯುತ್ತಿದೆ (Manipur violence). ಇದೀಗ ಇಬ್ಬರು ಕುಕಿ ಸಮುದಾಯದ ಮಹಿಳೆಯರನ್ನು ಕಿಡಿಗೇಡಿಗಳು ಬೆತ್ತಲೆ ಮೆರವಣಿಗೆ ಮಾಡಿ, ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಆ ವಿಡಿಯೊ ಕೂಡ ವೈರಲ್ ಆಗುತ್ತಿದೆ. ಅದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ‘ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಇಡೀ ದೇಶ, ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಆಗಿದೆ. ಈ ಬಗ್ಗೆ ನನ್ನ ಹೃದಯದಲ್ಲಿ ನೋವು, ಆಕ್ರೋಶ ತುಂಬಿದೆ’ ಎಂದು ಹೇಳಿದ್ದಾರೆ.

ಇಂದು ಸಂಸತ್ ಅಧಿವೇಶನಕ್ಕೂ ಪೂರ್ವ, ಸಂಸತ್ತಿನ ಒಳ ಹೋಗುವುದಕ್ಕೂ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ ‘ಮಣಿಪುರದ ಹೆಣ್ಣುಮಕ್ಕಳ ಮೇಲೆ ಕೈ ಹಾಕಿದವರನ್ನು ಯಾವ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಕಾನೂನು ಪ್ರಕಾರ ಏನೆಲ್ಲ ಕ್ರಮ ಕೈಗೊಳ್ಳಬೇಕೋ, ಅದನ್ನು ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ನಾನು ದೇಶಕ್ಕೆ ಕೊಡುತ್ತಿದ್ದೇನೆ’ ಎಂದು ಹೇಳಿದ್ದಾರೆ. ರಾಜಸ್ಥಾನವೇ ಆಗಿರಲಿ, ಛತ್ತೀಸ್​ಗಢ್​​ವೇ ಆಗಿರಲಿ ಅಥವಾ ಮಣಿಪುರವೇ ಆಗಿರಲಿ, ಎಲ್ಲ ಕಡೆ ಮಹಿಳೆಯರ ರಕ್ಷಣೆಯನ್ನು ಆದ್ಯತೆಯಾಗಿ ತೆಗೆದುಕೊಳ್ಳಿ ಎಂದು ಅಲ್ಲಿನ ಮುಖ್ಯಮಂತ್ರಿಗಳಲ್ಲಿ ನಾನು ಮನವಿ ಮಾಡುತ್ತೇನೆ. ಸ್ತ್ರೀಯರ ರಕ್ಷಣೆಗಾಗಿ ನಾವು ರಾಜಕೀಯವನ್ನೂ ಮೀರಿ ಕ್ರಮ ಕೈಗೊಳ್ಳಬೇಕಿದೆ’ ಎಂದು ಹೇಳಿದ್ದಾರೆ.

ಆತಂಕ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್​​
ಮಹಿಳೆಯರ ಬೆತ್ತಲೆ ವಿಡಿಯೊ ವೈರಲ್ ಆಗುತ್ತಿದ್ದಂತೆ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೊ ಆತಂಕ ಹುಟ್ಟಿಸುವಂತಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಕೋಮು ಸಂಘರ್ಷಕ್ಕೆ ಉಪಕರಣಗಳಂತೆ ಬಳಸಿಕೊಳ್ಳುವುದು ಸ್ವೀಕಾರ್ಹವಲ್ಲ. ಮಹಿಳೆಯರ ಬೆತ್ತಲೆ ವಿಡಿಯೊ ವೈರಲ್ ಆಗುತ್ತಿದೆ. ಇದು ಮನಸನ್ನು ದುಗುಡಕ್ಕೆ ದೂಡಿದೆ. ಸರ್ಕಾರ ಕ್ರಮ ಕೈಗೊಳ್ಳದೆ ಇದ್ದರೆ, ನಾವು ಕಠಿಣ ಹೆಜ್ಜೆ ಇಡಬೇಕಾಗುತ್ತದೆ’ ಎಂದು ಸಿಜೆಐ ಹೇಳಿದ್ದಾರೆ.

Exit mobile version