Site icon Vistara News

PM Modi: ಮೇ 19ರಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸ; ಯಾವೆಲ್ಲ ದೇಶಗಳಿಗೆ ಭೇಟಿ ಕೊಡಲಿದ್ದಾರೆ?

PM Modi To Visit Japan Australia on May 19 20

#image_title

ನವ ದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಮುಕ್ತಾಯಗೊಂಡಿತು. ಚುನಾವಣೆಗೂ ಮುನ್ನ ಸಾಲುಸಾಲು ರೋಡ್​ ಶೋ, ಸಮಾವೇಶ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇತ್ತೀಚೆಗೆ ರಾಜಸ್ಥಾನಕ್ಕೆ ತೆರಳಿ ಅಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಇನ್ನೀಗ ಅವರು ವಿದೇಶ ಪ್ರವಾಸದತ್ತ ಮುಖ ಮಾಡಿದ್ದಾರೆ. ಶುಕ್ರವಾರದಿಂದ ಅವರು ಆರು ದಿನಗಳ ಕಾಲ ವಿದೇಶಗಳಲ್ಲಿ ಇರಲಿದ್ದಾರೆ. ಮೇ 19ರಂದು ಅವರು ಜಪಾನ್​ಗೆ ತೆರಳಲಿದ್ದು, ಅಲ್ಲಿಂದ ಪಪುವಾ ನ್ಯೂ ಗಿನಿಯಾ ಮತ್ತು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಜಿ7 (ಗ್ರೂಪ್ ಆಫ್​ ಸೆವೆನ್​), ಕ್ವಾಡ್​ ಸೇರಿದಂಯೆ ಮೂರು ಬಹುಮುಖ್ಯವಾದ ಶೃಂಗಸಭೆಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಮೇ 19-21ರವರೆಗೆ ಪ್ರಧಾನಿ ಮೋದಿಯವರು ಜಪಾನ್​​ನಲ್ಲಿ ಇರಲಿದ್ದಾರೆ. ಹಿರೋಶಿಮಾದಲ್ಲಿ ಜಿ7 ಅಡ್ವಾನ್ಸ್ಡ್​​ ಎಕೊನಮಿಯ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು. ಅದರಲ್ಲಿ ಮೋದಿಯವರು ಜಾಗತಿಕ ಸಮಸ್ಯೆಗಳಾದ ಆಹಾರ ಕೊರತೆ, ರಾಸಾಯನಿಕ ಗೊಬ್ಬರ, ಇಂಧನ ಭದ್ರತೆ ಮತ್ತಿತರ ವಿಷಯಗಳ ಬಗ್ಗೆ ಮಾತನಾಡುವರು. ಅಲ್ಲಿಂದ ಮೋದಿಯವರು ಪಪುವಾ ನ್ಯೂ ಗಿನಿಯಾ ದೇಶದ ರಾಜಧಾನಿ ಪೋರ್ಟ್​ ಮೊರೆಸ್ಬಿಗೆ ಹೋಗಿ, ಮೇ 22ರಂದು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರಕ್ಕಾಗಿ ವೇದಿಕೆ (FIPIC)ಯ ಶೃಂಗವನ್ನು ಆಯೋಜಿಸಲಿದ್ದಾರೆ. ಈ ವೇಳೆ ನ್ಯೂ ಗಿನಿಯಾ ಪ್ರಧಾನಮಂತ್ರಿ ಜೇಮ್ಸ್ ಮರಾಪೆ ಉಪಸ್ಥಿತರಿರುವರು. ಅಂದಹಾಗೇ, ಪಪುವಾ ನ್ಯೂ ಗಿನಿಯಾಕ್ಕೆ ಇದು ಪ್ರಧಾನಿ ಮೋದಿಯವರ ಮೊದಲ ಭೇಟಿಯಾಗಿದೆ.

ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆ 2014ರಲ್ಲಿ ಪ್ರಾರಂಭವಾಗಿದೆ. ಇದರಲ್ಲಿ ಭಾರತ, ಫಿಜಿ, ಪಪುವಾ ನ್ಯೂ ಗಿನಿಯಾ, ಟೋಂಗಾ, ಟುವಾಲು, ಕಿರಿಬಾಟಿ, ಸಮೋವಾ, ವನವಾಟು, ನಿಯು, ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಶಿಯಾ, ರಿಪಬ್ಲಿಕ್ ಆಫ್ ಮಾರ್ಷಲ್ ಐಲ್ಯಾಂಡ್ಸ್, ಕುಕ್ ಐಲ್ಯಾಂಡ್ಸ್, ಪಲಾವ್, ನೌರು ಮತ್ತು ಸೊಲೊಮನ್ ದ್ವೀಪ ರಾಷ್ಟ್ರಗಳು ಇವೆ.

ಇದನ್ನೂ ಓದಿ: ಪ್ರಧಾನಿ ಮೋದಿಗೂ ಮುನ್ನ ಯುಎಸ್​ಎ ಪ್ರವಾಸಕ್ಕೆ ಹೊರಟು ನಿಂತ ರಾಹುಲ್ ಗಾಂಧಿ; 10ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೇ 22ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. 24ರವರೆಗೆ ಅಲ್ಲಿರಲಿದ್ದು, ಈ ವೇಳೆ ಅವರು ಕ್ವಾಡ್​ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು. ಈ ಶೃಂಗವನ್ನು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಆಯೋಜಿಸಿದ್ದಾರೆ. ಕ್ವಾಡ್​​ ಸಭೆಯಲ್ಲಿ ಯುಎಸ್​​ ಅಧ್ಯಕ್ಷ ಜೋ ಬೈಡೆನ್​, ಜಪಾನ್ ಪ್ರಧಾನಿ ಕಿಶಿಡೊ ಫ್ಯುಮಿಯೊ ಕೂಡ ಪಾಲ್ಗೊಳ್ಳಲಿದ್ದಾರೆ.

Exit mobile version