ನವ ದೆಹಲಿ: ಮರಾಠಾ ರಾಜ್ಯ ಸಂಸ್ಥಾಪಕ, ನಾಯಕತ್ವ, ಶೌರ್ಯಕ್ಕೆ ಇನ್ನೊಂದು ಹೆಸರಿನಂತೆ ಇರುವ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದ (Shivaji Maharaj Jayanti) ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಇಂದು ಟ್ವೀಟ್ ಮಾಡಿ, ಗೌರವ ಸಲ್ಲಿಸಿದ್ದಾರೆ. ‘ಛತ್ರಪತಿ ಮಹಾರಾಜರು ನಡೆಸಿದ್ದ ಉತ್ತಮ ಆಡಳಿತ ಮತ್ತು ಅವರ ಶೌರ್ಯ ನಮಗೆ ಸದಾ ಸ್ಫೂರ್ತಿ’ ಎಂದು ಹೇಳಿದ್ದಾರೆ. ಹಾಗೇ, ಒಂದು ಸಣ್ಣ ವಿಡಿಯೊವನ್ನೂ ಶೇರ್ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲಿಷ್ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಟ್ವೀಟ್ ಮಾಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರು ಹುಟ್ಟಿದ್ದು 1630ರ ಫೆ.19ರಂದು, ಮಹಾರಾಷ್ಟ್ರದ ಪುಣೆಯ ಸಮೀಪದಲ್ಲಿರುವ ಶಿವನೇರಿ ಎಂಬಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಅಣ್ಣ ಸಂಭಾಜಿಯವರಿಂದ ಪಡೆದು, ದಾದಾಜಿ ಕೊಂಡದೇವ ಅವರಿಂದ ಸಂಪೂರ್ಣ ಯುದ್ಧ ಕೌಶಲ ಕಲಿತರು. 12 ನೇ ವಯಸ್ಸಿನಲ್ಲೇ ಕತ್ತಿವರಸೆ, ಕುದುರೆ ಸವಾರಿಯಲ್ಲಿ ಪಳಗಿದ್ದರು. 1674ರಲ್ಲಿ ಮರಾಠ ರಾಜ್ಯ ಸ್ಥಾಪಿಸಿ, 1680ರವರೆಗೆ ಶೌರ್ಯದಿಂದ ರಾಜ್ಯವಾಳಿದ್ದ ಅವರು 1680ರಲ್ಲಿ ನಿಧನರಾಗಿದ್ದಾರೆ.