ನವ ದೆಹಲಿ: ಸ್ವಾತಂತ್ರ್ಯ ಹೋರಾಟದಲ್ಲಿ ವಿಭಿನ್ನವಾಗಿ ತೊಡಗಿಸಿಕೊಂಡು, ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವೇ ಆಗಿದ್ದ ಧೀರ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಇಂದು. ಭಾರತದಲ್ಲಿ 2021ರಿಂದ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಪರಾಕ್ರಮ ದಿವಸ್ (Parakram Diwas 2023)ಎಂದೇ ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ಕೂಡ ರಾಷ್ಟ್ರಾದ್ಯಂತ ಪರಾಕ್ರಮ್ ದಿವಸ್ ಆಚರಣೆ ನಡೆಯುತ್ತಿದೆ.
ಇಂದು ಸುಭಾಷ್ ಚಂದ್ರ ಬೋಸ್ ಜನ್ಮ ದಿನದ ನಿಮಿತ್ತ ಪ್ರಧಾನಿ ಟ್ವೀಟ್ ಮಾಡಿ, ಅವರನ್ನು ಸ್ಮರಿಸಿದ್ದಾರೆ. ‘ಪರಾಕ್ರಮ್ ದಿವಸ್ದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಪೂರ್ವಕ ನಮನಗಳು. ಭಾರತಕ್ಕೆ ಅವರು ನೀಡಿರುವ ಕೊಡುಗೆಗೆ ಸಾಟಿಯಿಲ್ಲ. ಬ್ರಿಟಿಷ್ ಆಳ್ವಿಕೆಯನ್ನು ಅವರು ತೀವ್ರವಾಗಿ ವಿರೋಧಿಸಿದ್ದರು. ಅವರ ಆಲೋಚನೆಗಳಿಂದ ನಾವು ತೀವ್ರವಾಗಿ ಪ್ರಭಾವಿತರಾಗಿದ್ದೇವೆ. ಹೀಗಾಗಿ ಅವರ ದೃಷ್ಟಿಕೋನದ ಭಾರತ ನಿರ್ಮಾಣದ ಗುರಿ ಹೊತ್ತಿದ್ದೇವೆ’ ಎಂದು ಹೇಳಿದ್ದಾರೆ. ಹಾಗೇ, ಹಲವು ಗಣ್ಯರು ಟ್ವೀಟ್ ಮಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಸ್ಮರಿಸಿದ್ದಾರೆ.
ಇದನ್ನೂ ಓದಿ: Shivamogga Airport : ಫೆ.27ರಂದು ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟನೆ; ಪ್ರಧಾನಿ ಮೋದಿ ಆಗಮನ
ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ 11ಗಂಟೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿರುವ 21 ದ್ವೀಪಗಳಿಗೆ ಹೆಸರಿಡಲಿದ್ದಾರೆ. ಆ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ನಾಮಕರಣ ಮಾಡಲಿದ್ದಾರೆ.