Site icon Vistara News

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಬಗ್ಗೆ ವಿಪಕ್ಷಗಳ ಅಭಿಪ್ರಾಯ ತಿಳಿಯಲು ಇಚ್ಛಿಸಿದ ಪ್ರಧಾನಿ ಮೋದಿ

Narendra Modi

ನವದೆಹಲಿ: ಭಾರತದ ಮುಂದಿನ ರಾಷ್ಟ್ರಪತಿ ಯಾರಾಗಬಹುದು?-ಈ ಬಗ್ಗೆ ರಾಜಕೀಯ ವಲಯದಲ್ಲಿ ದೊಡ್ಡಮಟ್ಟದ ಚರ್ಚೆ ನಡೆಯುತ್ತಿದೆ. ಚುನಾವಣೆಯಲ್ಲಿ ಮತದಾನ ಮಾಡಲಿರುವ ಒಟ್ಟಾರೆ ಲೋಕಸಭಾ, ರಾಜ್ಯಸಭಾ ಸದಸ್ಯರು, ವಿವಿಧ ರಾಜ್ಯಗಳ ಶಾಸಕರ ಸಂಖ್ಯೆಯ ಆಧಾರದ ಮೇಲೆ ಹೇಳಬೇಕು ಎಂದರೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂಬುದು ಸ್ಪಷ್ಟ. ಆದರೆ ಆ ಅಭ್ಯರ್ಥಿ ಯಾರಾಗಬಹುದು. ಈ ಸಲ ಎನ್‌ಡಿಎ ಯಾರಿಗೆ ಮಣೆ ಹಾಕಬಹುದು ಎಂಬ ಪ್ರಶ್ನೆ ಎದ್ದಿದೆ. ಇದೆಲ್ಲದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಇತರ ಪ್ರತಿಪಕ್ಷಗಳ ಅಭಿಪ್ರಾಯ ಏನೆಂದು ತಿಳಿದುಕೊಳ್ಳಲು ಬಯಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ತಿಳಿಸಿದ್ದಾರೆ.

ಎಎನ್‌ಐ ಸುದ್ದಿ ಮಾಧ್ಯಮದ ಜತೆ ಮಾತನಾಡಿದ ಮಲ್ಲಿಕಾರ್ಜುನ್‌ ಖರ್ಗೆ, ರಾಷ್ಟ್ರಪತಿ ಚುನಾವಣೆ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪ್ರತಿಪಕ್ಷಗಳ ಅಭಿಪ್ರಾಯ ಏನು ಎಂಬುದನ್ನು ಪ್ರಧಾನಿ ತಿಳಿದುಕೊಳ್ಳಲು ಇಚ್ಛಿಸಿದ್ದಾರೆ ಎಂದು ರಾಜನಾಥ್‌ ಸಿಂಗ್‌ ಅವರೇ ನನಗೆ ಹೇಳಿದ್ದಾರೆ. ʼಪ್ರತಿಪಕ್ಷಗಳ ಪ್ರಸ್ತಾವನೆ, ಅಭಿಪ್ರಾಯ ಏನು? ಅವರ ಅಭ್ಯರ್ಥಿಗಳು ಯಾರು?ʼ ಎಂಬುದನ್ನು ತಿಳಿಯಲು ಪ್ರಧಾನಿ ಮೋದಿ ಆಸಕ್ತಿ ವಹಿಸಿದ್ದಾರಂತೆ. ಆದರೆ ಹಾಗೊಮ್ಮೆ ನಾವೇನಾದರೂ ಅಂದರೆ ಪ್ರತಿಪಕ್ಷಗಳೆಲ್ಲ ಸೇರಿ ಸರ್ವಾನುಮತದಿಂದ ಒಬ್ಬ ಅಭ್ಯರ್ಥಿಯ ಹೆಸರು ಹೇಳಿದರೆ, ಅದನ್ನು ಸರ್ಕಾರ ಒಪ್ಪಿಕೊಳ್ಳಲಿದೆಯೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ʻಮಮತಾʼ ಸಭೆಗೆ ಸರ್ವ ಸಜ್ಜು; ಬರಲ್ಲ ಎಂದ ಟಿಆರ್‌ಎಸ್‌, ಆಪ್‌, ಬಿಜೆಡಿ

ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅಧಿಕಾರ ಅವಧಿ ಜು.24ಕ್ಕೆ ಮುಗಿಯಲಿರುವ ಹಿನ್ನೆಲೆಯಲ್ಲಿ ಜು.18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಹಲವು ಹಿರಿಯ ರಾಜಕಾರಣಿಗಳ ಹೆಸರು ರಾಷ್ಟ್ರಪತಿ ಹುದ್ದೆ ರೇಸ್‌ನಲ್ಲಿ ಕೇಳಿಬರುತ್ತಿದ್ದರೂ ಇದುವರೆಗೂ ಸ್ಪಷ್ಟತೆ ಇಲ್ಲ. ಪ್ರತಿಪಕ್ಷಗಳೆಲ್ಲ ಸೇರಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಿದ್ಧತೆ ನಡೆಯುತ್ತಿದ್ದು, ಅದರ ಬಗ್ಗೆ ಚರ್ಚಿಸಲು ಇಂದು ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಪ್ರತಿಪಕ್ಷಗಳ ಸಭೆ ನಡೆಸುತ್ತಿದ್ದಾರೆ. ಒಟ್ಟು 22 ಪಕ್ಷಗಳಿಗೆ ಅವರು ಆಮಂತ್ರಣ ನೀಡಿದ್ದು, ಅದರಲ್ಲಿ ಟಿಆರ್‌ಎಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳು ಭಾಗವಹಿಸುವುದಿಲ್ಲ ಎಂದು ಹೇಳಿವೆ. ಉಳಿದಂತೆ ಎಲ್ಲ ಪ್ರಮುಖ ಪಕ್ಷಗಳ ನಾಯಕರೂ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: ರಾಷ್ಟ್ರಪತಿ ಚುನಾವಣೆ 2022- ಯಾರ ಮತಕ್ಕೆ ಎಷ್ಟು ಬೆಲೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

Exit mobile version