ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 23 (ಭಾನುವಾರ)ರಂದು ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ಕೊಟ್ಟು, ಅಲ್ಲಿ ದೀಪಾವಳಿ ಹಬ್ಬ ಆಚರಿಸಲಿದ್ದಾರೆ. ಶ್ರೀರಾಮ ಜನ್ಮಭೂಮಿಯ ರಾಮಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಅಕ್ಟೋಬರ್ 24ರಿಂದ ದೀಪಾವಳಿ ಆಚರಣೆ ಪ್ರಾರಂಭವಾಗಲಿದ್ದು, ಅದಕ್ಕೂ ಒಂದು ದಿನ ಮುಂಚಿತವಾಗಿ ಅಂದರೆ ಅ.23ರಿಂದ ಅಯೋಧ್ಯೆಯಲ್ಲಿ ಮೂರು ದಿನಗಳ ದೀಪೋತ್ಸವ ಪ್ರಾರಂಭವಾಗುತ್ತದೆ. ತನ್ನಿಮಿತ್ತ ಪ್ರಧಾನಿ ಮೋದಿ ಅಲ್ಲಿಗೆ ಭೇಟಿ ಕೊಟ್ಟು, ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಈ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದೆ.
ಭಾನುವಾರ ಸಂಜೆ 5ಗಂಟೆ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಗೆ ತೆರಳಿ, ಅಲ್ಲಿ ರಾಮಲಲ್ಲಾಂಗೆ ಪೂಜೆ ಸಲ್ಲಿಸುವರು. ಬಳಿಕ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಪ್ರವಾಸಿ ತಾಣವನ್ನೂ ಅವರು ಪರಿಶೀಲನೆ ಮಾಡುವರು. 5.40ರ ಹೊತ್ತಿಗೆ ಶ್ರೀ ರಾಮ ಕಥಾ ಪಾರ್ಕ್ನಲ್ಲಿ ನಡೆಯಲಿರುವ ಶ್ರೀರಾಮ ರಾಜ್ಯಾಭಿಷೇಕ ಕಾರ್ಯಕ್ರಮ ವೀಕ್ಷಿಸುವರು. ಬಳಿಕ 6.30ಕ್ಕೆ ಸರಯೂ ಘಾಟ್ನಲ್ಲಿ ಜರುಗುವ ಆರತಿಯಲ್ಲಿ ಪಾಲ್ಗೊಳ್ಳುವರು. ಬಳಿಕ 6.40ಕ್ಕೆ ರಾಮ್ ಕಿ ಪೌಡಿ ಘಾಟ್ನಲ್ಲಿ ನಡೆಯುವ ದೀಪೋತ್ಸವದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಆ ಹೊತ್ತಲ್ಲಿ ಡಿಜಿಟಲ್ ಪಟಾಕಿ ಸಿಡಿಯಲಿದೆ. ಬುಧವಾರ (ಅ.26) ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಅಲ್ಲಿಗೆ ತೆರಳಲಿದ್ದಾರೆ.
ಇದನ್ನೂ ಓದಿ: ವಿಸ್ತಾರ Exclusive | ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಯಾವಾಗ?: ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್ ನಾಗರಕಟ್ಟೆ ಸಂದರ್ಶನ