ನವ ದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು 50ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಯೋಗಿ ಆದಿತ್ಯನಾಥ್‌ರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರೀತಿಯಿಂದ ಶುಭ ಹಾರೈಸಿದ್ದಾರೆ. ಟ್ವೀಟ್ ಮಾಡಿರುವ ನರೇಂದ್ರ ಮೋದಿ, ʼಉತ್ತರ ಪ್ರದೇಶದ ಡೈನಾಮಿಕ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರಿಗೆ ಹುಟ್ಟುಹಬ್ಬದ ಶುಭಾಶಯಗಳು. ಯೋಗಿ ಜೀ ನೇತೃತ್ವದಲ್ಲಿ ಉತ್ತರ ಪ್ರದೇಶ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ತಮ್ಮದು ಜನ ಪರ ಸರ್ಕಾರವೆಂಬುದನ್ನು ಅವರು ಸಾಬೀತುಪಡಿಸಿ, ನಾಗರಿಕರಲ್ಲಿ ಭರವಸೆ ಹುಟ್ಟಿಸಿದ್ದಾರೆ. ಅವರಿಗೆ ಭಗವಂತ ಆಯುಷ್ಯ-ಆರೋಗ್ಯ ಕೊಟ್ಟು ಕಾಪಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆʼ ಎಂದು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಅವರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಸೇರ ವಿವಿಧ ಸಚಿವರು, ಪಕ್ಷದ ನಾಯಕರು ಶುಭ ಹಾರೈಸಿದ್ದಾರೆ. ಪ್ರತಿಯೊಬ್ಬರೂ ಅವರ ಆಡಳಿತ ಕ್ರಮವನ್ನು ಹೊಗಳಿದ್ದಾರೆ. ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಕೂಡ ಯೋಗಿ ಆದಿತ್ಯನಾಥ್‌ಗೆ ಬರ್ತ್ ಡೇ ವಿಶ್ ತಿಳಿಸಿದ್ದಾರೆ. ಯೋಗಿ ಜೀ ಇಂದು 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿನಂದನೆಗಳು..ಎಂದು ಟ್ವೀಟ್ ಮಾಡಿದ್ದಾರೆ.
ಯೋಗಿ ಆದಿತ್ಯನಾಥ್ ಹುಟ್ಟಿದ್ದು 1972ರಲ್ಲಿ. ಇವರ ಬಾಲ್ಯದ ಹೆಸರು ಅಜಯ್ ಕುಮಾರ್ ಬಿಷ್ಟ್. ಮೂಲತಃ ಉತ್ತರಾಖಂಡ್‌ನ ಪಂಚೂರ್ ಗ್ರಾಮದವರು. ಬಿಎಸ್‌ಸಿ ಪದವೀಧರರೂ ಹೌದು. ಅವರಿಗೆ ಬಾಲ್ಯದಲ್ಲಿ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಎಷ್ಟು ಆಸಕ್ತಿಯಿತ್ತೋ ಅಷ್ಟೇ ಅಧ್ಯಾತ್ಮದೆಡೆಗೂ ಮನಸು ಸೆಳೆಯುತ್ತಿತ್ತು. 19ನೇ ವಯಸ್ಸಿಗೆ ಮನೆಬಿಟ್ಟು, ಗೋರಖಪುರದ ಗೋರಖಾನಾಥ ಮಠದ ಮಹಾಂತ ವೈದ್ಯನಾಥರ ಸಂಪರ್ಕಕ್ಕೆ ಬರುತ್ತಾರೆ. ಅವರ ಶಿಷ್ಯರಾಗಿ ಸನ್ಯಾಸತ್ವವನ್ನೂ ಸ್ವೀಕರಿಸಿ ಯೋಗಿ ಆದಿತ್ಯನಾಥ್ ಆಗುತ್ತಾರೆ. 1998ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದಾಗ ಅವರಿಗೆ 24 ವರ್ಷ. ಬಳಿಕ 1999, 2004, 2009 ಮತ್ತು 2014ರ ಚುನಾವಣೆಗಳಲ್ಲೂ ನಿರಂತರವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಈ ಮಧ್ಯೆ ಗೋರಖನಾಥ ಮಠದ ಮಹಾಂತ ಅವೈದ್ಯನಾಥ ಅವರು ತೀರಿಕೊಂಡಿದ್ದರಿಂದ 2014ರಲ್ಲಿ ಆ ಮಠದ ಪೀಠಕ್ಕೆ ಏರುತ್ತಾರೆ.
2017ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಹಲವು ವರ್ಷಗಳ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯೋಗಿಯನ್ನು ಮುಖ್ಯಮಂತ್ರಿಯಾಗಿ ಮಾಡಿದಾಗ ಪಕ್ಷದೊಳಗಿನ ಹಲವರೇ ಅಸಮಾಧಾನಗೊಂಡಿದ್ದರು. ಈ ಸನ್ಯಾಸಿ ರಾಜ್ಯಭಾರ ಮಾಡಬಲ್ಲನೇ? ಎಂದು ಪ್ರತಿಪಕ್ಷಗಳು ಕುಹಕವಾಡಿದ್ದೂ ಇದೆ. ಆದರೆ ಎಲ್ಲದಕ್ಕೂ ತಮ್ಮ ಕೆಲಸ, ಆಡಳಿತ ಶೈಲಿಯ ಮೂಲಕವೇ ಯೋಗಿ ಆದಿತ್ಯನಾಥ್ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಭರ್ಜರಿ ಗೆಲುವಿನೊಂದಿಗೆ ಎರಡನೇ ಅವಧಿಗೆ ಸಿಎಂ ಪಟ್ಟಕ್ಕೇರಿ, ಉತ್ತರ ಪ್ರದೇಶದಲ್ಲೊಂದು ಇತಿಹಾಸ ಬರೆದಿದ್ದಾರೆ.
ಇದನ್ನೂ ಓದಿ: ಸಾಮ್ರಾಟ್ ಪೃಥ್ವಿರಾಜ್ ಗೆ ತೆರಿಗೆ ವಿನಾಯಿತಿ ಘೋಷಿಸಿದ ಯೋಗಿ ಆದಿತ್ಯನಾಥ್