ನವ ದೆಹಲಿ: ಹರ್ಯಾಣದಲ್ಲಿ ಹೊಸ ಜೈವಿಕ ಇಂಧನ ಪ್ಲಾಂಟ್ನ್ನು ನಿರ್ಮಾಣ ಮಾಡಲಾಗಿದೆ. ಹಾಗೇ ಈ ಪ್ರದೇಶದ ಸುತ್ತಮುತ್ತಲೂ ಕತ್ತರಿಸುವ ಪೈರಿನ ಕೂಳೆಯನ್ನು ಸಾಗಿಸಲು ಅಗತ್ಯವಿರುವ ವ್ಯವಸ್ಥೆಗಳನ್ನೂ ಮಾಡಲಾಗುತ್ತಿದೆ. ಈ ಘಟಕದಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಸುತ್ತಲಿನ ಹಳ್ಳಿಯವರು, ರೈತರು ಕೂಡ ಇದರಿಂದ ಅನುಕೂಲ ಪಡೆಯುತ್ತಾರೆ. ಅಷ್ಟೇ ಅಲ್ಲ, ದೇಶದ ವಾಯುಮಾಲಿನ್ಯವೂ ನಿಯಂತ್ರಣಕ್ಕೆ ಬರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ವಿಶ್ವ ಜೈವಿಕ ಇಂಧನ ದಿನದ ನಿಮಿತ್ತ ಹರ್ಯಾಣದಲ್ಲಿ ಅಭಿವೃದ್ಧಿಪಡಿಸಲಾದ ನೂತನ 2ಜಿ ಎಥನಾಲ್ ಪ್ಲಾಂಟ್ನ್ನು ಇಂದು ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ಮಾತನಾಡಿದ ಅವರು, ‘ನಮ್ಮ ದೇಶದಲ್ಲಿ ಪ್ರಕೃತಿಯನ್ನು ಪೂಜಿಸುವ ಸಂಸ್ಕೃತಿ ಇದೆ. ಅಂಥ ಪ್ರಕೃತಿಯನ್ನು ಈ ಜೈವಿಕ ಇಂಧನ ರಕ್ಷಣೆ ಮಾಡುತ್ತದೆ. ಇದರಿಂದ ಎಷ್ಟು ಅನುಕೂಲವಿದೆ ಎಂಬುದನ್ನು ನಮ್ಮ ರೈತರು ಅರ್ಥ ಮಾಡಿಕೊಂಡಿದ್ದಾರೆ. ಜೈವಿಕ ಇಂಧನ ಎಂದರೆ ನನ್ನ ಕಣ್ಣಲ್ಲಿ, ಪರಿಸರವನ್ನು ಉಳಿಸುವ ಹಸಿರು ಇಂಧನ ಎಂದು ಹೇಳಿದರು.
ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಕುಟುಂಬದ ಒಳಿತಿಗಾಗಿ ರಾಜಕಾರಣ ಮಾಡುವ ಯಾರೇ ಆದರೂ, ಪೆಟ್ರೋಲ್-ಡೀಸೆಲ್ನ್ನು ಉಚಿತವಾಗಿ ಕೊಡುತ್ತೇವೆ, ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ನೀಡುತ್ತೇವೆ ಎಂದು ಹೇಳಬಹುದು. ಆದರೆ ಅಂಥ ಉಚಿತಗಳ ಭರವಸೆ ಕೊಡುವುದರಿಂದ ನಮ್ಮ ಮಕ್ಕಳಿಂದ ಅವರ ಹಕ್ಕನ್ನು ಕಿತ್ತುಕೊಂಡಂತೆ ಆಗುತ್ತದೆ. ನಮ್ಮ ದೇಶ ಸ್ವಾವಲಂಬಿ ಆಗುವುದಕ್ಕೆ ನಾವೇ ಅಡ್ಡಗಾಲು ಹಾಕಿದಂತೆ ಆಗುತ್ತದೆ. ಅಷ್ಟೇ ಅಲ್ಲ, ದೇಶದಲ್ಲಿ ತೆರಿಗೆ ಪಾವತಿ ಮಾಡುವವರ ಮೇಲೆ ಹೆಚ್ಚಿನ ಹೊರೆ ಉಂಟಾಗುತ್ತದೆ ಎಂದು ನರೇಂದ್ರ ಮೋದಿ ತಿಳಿಸಿದರು.
ಬ್ಲ್ಯಾಕ್ ಮ್ಯಾಜಿಕ್ ಪ್ರಸ್ತಾಪ
ಆಗಸ್ಟ್ 5ರಂದು ಕಾಂಗ್ರೆಸ್ನವರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಿದ್ದಕ್ಕೆ ಇದೇ ಹೊತ್ತಲ್ಲಿ ತಿರುಗೇಟು ನೀಡಿದ ಪ್ರಧಾನಿ ಮೋದಿ ‘ದೇಶದಲ್ಲಿ ಕೆಲವು ಜನರು ಹತಾಶೆ ಮತ್ತು ಋಣಾತ್ಮಕತೆಯನ್ನೇ ತುಂಬಿಕೊಂಡಿದ್ದಾರೆ. ಜನರನ್ನು ನಂಬಿಸಲು ಅವರು ಆಗಸ್ಟ್ 5ರಂದು ಏನು ಮಾಡಿದರು ಎಂದು ನಾವೆಲ್ಲ ನೋಡಿದ್ದೇವೆ. ಅಂಥ ಬ್ಲ್ಯಾಕ್ ಮ್ಯಾಜಿಕ್ಗಳನ್ನು, ಮೂಢ ನಂಬಿಕೆಗಳನ್ನೆಲ್ಲ ಜನರು ನಂಬುವುದನ್ನು ಬಿಟ್ಟುಬಿಟ್ಟಿದ್ದಾರೆ. ಹಾಗೇ, ಕಪ್ಪು ಬಟ್ಟೆ ತೊಟ್ಟಾಕ್ಷಣ, ನಮ್ಮ ಹತಾಶೆಯೂ ನಿರ್ನಾಮ ಆಗುತ್ತದೆ ಎಂಬ ಯೋಚನೆಯನ್ನು ಈ ಬ್ಲ್ಯಾಕ್ಮ್ಯಾಜಿಕ್ ಮಾಡುವ ಜನರು ಬಿಡಬೇಕು ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: PM Modi Assets | ಇದ್ದ ಭೂಮಿಯನ್ನೂ ದಾನ ನೀಡಿದ ಪ್ರಧಾನಿ ಮೋದಿ; ಆಸ್ತಿಯಲ್ಲಿ 26 ಲಕ್ಷ ರೂ. ಹೆಚ್ಚಳ