Site icon Vistara News

Narendra Modi: ʼದಿ ವ್ಯಾಕ್ಸಿನ್‌ ವಾರ್‌ʼ ಚಿತ್ರ ಪ್ರಚಾರ ಮಾಡಿದ ಪ್ರಧಾನಿ ಮೋದಿ!

the vaccine war

the vaccine war

ಜೋಧಪುರ: ರಾಜಸ್ಥಾನದ ಜೋಧಪುರದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇತ್ತೀಚೆಗೆ ಬಿಡುಗಡೆಗೊಂಡ ಬಾಲಿವುಡ್‌ ಚಿತ್ರ ʼದಿ ವ್ಯಾಕ್ಸಿನ್‌ ವಾರ್‌ʼ (The Vaccine War) ಅನ್ನು ಹೊಗಳಿದ್ದಾರೆ. ಜನಪ್ರಿಯ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ (Vivek Agnihotri) ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರ ಕೋವಿಡ್‌ ಸಮಯದಲ್ಲಿ ಲಸಿಕೆ ಅಭಿವೃದ್ಧಿಪಡಿಸಲು ಭಾರತೀಯ ವಿಜ್ಞಾನಿಗಳು ನಡೆಸಿದ ಹೋರಾಟ, ಎದುರಿಸಿದ ಸವಾಲನ್ನು ತೆರೆದಿಡುತ್ತದೆ. ನಾನಾ ಪಾಟೇಕರ್‌, ಸಪ್ತಮಿ ಗೌಡ, ಪಲ್ಲವಿ ಜೋಶಿ, ಅನುಪಮ್‌ ಖೇರ್‌, ರೈಮಾ ಸೇನ್‌ ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

“ದಿ ವ್ಯಾಕ್ಸಿನ್‌ ವಾರ್‌’ ಎಂಬ ಚಲನಚಿತ್ರ ಬಿಡುಗಡೆಯಾಗಿದೆ ಎಂದು ಕೇಳಿದ್ದೇನೆ. ಇದು ಋಷಿಮುನಿಗಳಂತೆ ತಮ್ಮ ಪ್ರಯೋಗಾಲಯಗಳಲ್ಲಿ ಕೋವಿಡ್ ವಿರುದ್ಧ ಹೋರಾಡಲು ಹಗಲು ರಾತ್ರಿ ಕೆಲಸ ಮಾಡಿದ ನಮ್ಮ ದೇಶದ ವಿಜ್ಞಾನಿಗಳ ಅವಿರತ ಪ್ರಯತ್ನಗಳನ್ನು ಚಿತ್ರಿಸುತ್ತದೆ. ನಮ್ಮ ಮಹಿಳಾ ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯಲು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಈ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಈ ಸಿನಿಮಾ ವೀಕ್ಷಿಸಿದ ಬಳಿಕ ನಮ್ಮ ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯಲು ಎಷ್ಟೆಲ್ಲ ಪ್ರಯತ್ನ ಪಟ್ಟಿದ್ದಾರೆ ಎನ್ನುವುದು ತಿಳಿಯಲಿದೆʼʼ ಎಂದು ಮೋದಿ ಹೇಳಿದ್ದಾರೆ.

ʼʼವಿಜ್ಞಾನಿಗಳು ಮತ್ತು ವಿಜ್ಞಾನ ಇವೆರಡರ ಪ್ರಾಧಾನ್ಯತೆಯನ್ನು ಸಾರಿದ್ದಕ್ಕಾಗಿ ನಾನು ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆʼʼ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಚಿತ್ರವನ್ನು ಭಾಷಣದಲ್ಲಿ ಉಲ್ಲೇಖಿಸಿದ್ದಕ್ಕಾಗಿ ವಿವೇಕ್‌ ಅಗ್ನಿಹೋತ್ರಿ ಎಕ್ಸ್‌ ಮೂಲಕ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ʼʼಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ನಾಯಕತ್ವದಲ್ಲಿ ಕೋವಿಡ್‌ ಲಸಿಕೆಯ ಅಭಿವೃದ್ಧಿಪಡಿಸಲು ಶ್ರಮಿಸಿದ ಭಾರತೀಯ ವಿಜ್ಞಾನಿಗಳ ಅದರಲ್ಲೂ ಮಹಿಳಾ ವಿಜ್ಞಾನಿಗಳ ಕೊಡುಗೆಯನ್ನು ಗುರುತಿಸಿರುವುದು ವಿಶೇಷ. ಮೊದಲ ಬಾರಿ ಪ್ರಧಾನಿಯೊಬ್ಬರು ವೈರಾಲಜಿಸ್ಟ್‌ಗಳೆಂದು ತಮ್ಮನ್ನು ಕರೆದರೆಂದು ಮಹಿಳಾ ವಿಜ್ಞಾನಿಗಳು ಭಾವುಕರಾಗಿದ್ದಾರೆ. ಕೃತಜ್ಞತೆʼʼ ಎಂದು ವಿವೇಕ್‌ ಅಗ್ನಿಹೋತ್ರಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: The Vaccine War Movie: ದಿ ವ್ಯಾಕ್ಸಿನ್ ವಾರ್ ಸಿನಿಮಾ ಟ್ರೈಲರ್ ಔಟ್, ಜನರಿಂದ ಸಖತ್ ರೆಸ್ಪಾನ್ಸ್!

ʼದಿ ವ್ಯಾಕ್ಸಿನ್‌ ವಾರ್‌ʼ ಚಿತ್ರದ ಬಗ್ಗೆ

ಕಳೆದ ವರ್ಷ ತೆರೆಕಂಡು ಸಂಚಲನ ಮೂಡಿಸಿದ್ದ ʼದಿ ಕಾಶ್ಮೀರ್‌ ಫೈಲ್ಸ್‌ʼ ಚಿತ್ರದ ಬಳಿಕ ವಿವೇಕ್‌ ಅಗ್ನಿಹೋತ್ರಿ ಆ್ಯಕ್ಷನ್‌ ಕಟ್‌ ಹೇಳಿದ ಚಿತ್ರ ʼದಿ ವ್ಯಾಕ್ಸಿನ್‌ ವಾರ್‌ʼ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಈ ಚಿತ್ರ ಸೆಪ್ಟಂಬರ್‌ 28ರಂದು ತೆರೆಗೆ ಬಂದಿದೆ. ಸುಮಾರು 10 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಇದುವರೆಗೆ ಸುಮಾರು 8 ಕೋಟಿ ರೂ. ಗಳಿಸಲಷ್ಟೇ ಶಕ್ತವಾಗಿದೆ. ಬಹು ನಿರೀಕ್ಷೆಯಿಂದ ಬಿಡುಗಡೆಯಾಗಿದ್ದ ಈ ಸಿನಿಮಾ ಅಂದುಕೊಂಡಷ್ಟು ಉತ್ತಮ ಕಲೆಕ್ಷನ್‌ ಮಾಡಿಲ್ಲ. ಚಿತ್ರದ ಕಳಪೆ ಪ್ರದರ್ಶನದ ಬಗ್ಗೆ ಈ ಹಿಂದೆ ಮಾತನಾಡಿದ್ದ ವಿವೇಕ್‌ ಅಗ್ನಿ ಹೋತ್ರಿ ತಮ್ಮದೇ ವ್ಯಾಖ್ಯಾನ ನೀಡಿದ್ದರು. “ಹೊಸ ಪುಸ್ತಕದಂಗಡಿಯಲ್ಲಿ ಭಗವದ್ಗೀತೆ ಮತ್ತು ಪ್ಲೇಬಾಯ್ ಪುಸ್ತಕಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸುತ್ತೀರಿ ಎಂದಿಟ್ಟುಕೊಳ್ಳೋಣ. ಆಗ 1,000 ಪ್ರತಿ ಪ್ಲೇಬಾಯ್ ಪುಸ್ತಕ ಮಾರಾಟವಾದರೆ ಭಗವದ್ಗೀತೆಯ 10 ಪ್ರತಿಗಳು ಮಾತ್ರ ಮಾರಾಟವಾಗುತ್ತವೆ. ಇದರಿಂದ ಭಗವದ್ಗೀತೆಯ ಜನಪ್ರಿಯತೆ ಕಡಿಮೆಯಾಗಿದೆ ಎಂದು ನಿರ್ಧರಿಲಾಗುವುದಿಲ್ಲ ಅಲ್ಲವೆ?ʼʼ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version