ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣಪತ್ರವನ್ನು ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರ್ಟಿಐ ಕಾಯ್ದೆಯಡಿ ಕೇಳಿದ್ದರು. ಅರವಿಂದ್ ಕೇಜ್ರಿವಾಲ್ ಕೇಳಿದ ದಾಖಲೆಯನ್ನು ನೀಡುವಂತೆ ಮುಖ್ಯ ಮಾಹಿತಿ ಆಯುಕ್ತರು (CIC) ಗುಜರಾತ್ ವಿಶ್ವವಿದ್ಯಾಲಯಕ್ಕೆ 2016ರಲ್ಲಿ ನಿರ್ದೇಶನ ನೀಡಿದ್ದರು. ಸಿಐಸಿಯ ಈ ನಿರ್ದೇಶನದ ವಿರುದ್ಧ ಗುಜರಾತ್ ಯೂನಿವರ್ಸಿಟಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಗುಜರಾತ್ ಯೂನಿವರ್ಸಿಟಿ ಪರ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಆರ್ಟಿಐ ಕಾಯ್ದೆಯ ದುರುಪಯೋಗ ಆಗುತ್ತಿದೆ’ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣ ಪತ್ರ ಪಡೆಯಲು ಆರ್ಟಿಐ ಕಾಯ್ದೆ ಅನ್ವಯ ಮಾಡಲು ಆಗುವುದಿಲ್ಲ. ಯಾರೋ ಒಬ್ಬರ ಬಾಲಿಶ ಕುತೂಹಲವೆಲ್ಲ ಸಾರ್ವಜನಿಕ ಹಿತಾಸಕ್ತಿ ಆಗುವುದಿಲ್ಲ ಎಂದು ಕೋರ್ಟ್ಗೆ ತಿಳಿಸಿದರು.
ಯಾವುದೇ ಸಾರ್ವಜನಿಕ ಆಡಳಿತ ಹುದ್ದೆಯಲ್ಲಿರುವ ಯಾರೇ ಆಗಿರಲಿ, ಅವರ ಸಾರ್ವಜನಿಕ ಚಟುವಟಿಕೆಗಳಿಗೆ ಸಂಬಂಧವಿಲ್ಲದೆ ಇರುವ, ಇನ್ನೊಬ್ಬರ ವೈಯಕ್ತಿಕ ವಿಷಯಗಳನ್ನೆಲ್ಲ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುವಂತಿಲ್ಲ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿಯವರ ಪದವಿ ಬಗ್ಗೆ ಸಾರ್ವಜನಿಕ ಡೊಮೇನ್ನಲ್ಲಿ ಮಾಹಿತಿ ನೀಡಲಾಗಿದೆ. ಗುಜರಾತ್ ವಿಶ್ವವಿದ್ಯಾಲಯವೂ ಕೂಡ ಈ ಹಿಂದೆ ತನ್ನ ವೆಬ್ಸೈಟ್ನಲ್ಲಿ ಈ ಬಗ್ಗೆ ವಿವರವನ್ನು ನೀಡಿತ್ತು ಎಂದು ಸಾಲಿಸಿಟರ್ ಜನರಲ್ ವಾದಿಸಿದರು.
ಇನ್ನೊಂದೆಡೆ ಅರವಿಂದ್ ಕೇಜ್ರಿವಾಲ್ ಪರ ವಕೀಲರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಬೇಕು. ಪ್ರಧಾನಿ ಮೋದಿಯವರ ಪದವಿ ಬಗೆಗಿನ ಮಾಹಿತಿ ಯಾವುದೇ ಸಾರ್ವಜನಿಕ ಡೊಮೇನ್ನಲ್ಲಿ ಸಿಗುತ್ತಿಲ್ಲ ಎಂದು ವಾದಿಸಿದ್ದರು. ಎರಡೂ ಕಡೆಯವರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಬಿರೆನ್ ವೈಷ್ಣವ್ ಅವರು ತೀರ್ಪು ಕಾಯ್ದಿರಿಸಿದ್ದಾರೆ.