ನವದೆಹಲಿ: ಎರಡು ದಿನಗಳ ಜಪಾನ್ ಪ್ರವಾಸ ಮುಗಿಸಿ ಇಂದು ಬೆಳಗ್ಗೆ ದೆಹಲಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಚಿವ ಸಂಪುಟದ ತುರ್ತು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಎಸ್.ಜೈಶಂಕರ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಕಿರಣ್ ರಿಜಿಜು, ಅನುರಾಗ್ ಠಾಕೂರ್, ಸ್ಮೃತಿ ಇರಾನಿ ಮತ್ತಿತರರು ಇದ್ದರು. ಸಭೆ ಬಳಿಕ ಟ್ವೀಟ್ ಮಾಡಿದ ಸಚಿವ ಕಿರಣ್ ರಿಜಿಜು ಸಭೆಯ ವಿಡಿಯೋ ಶೇರ್ ಮಾಡಿದ್ದಾರೆ. ನರೇಂದ್ರ ಮೋದಿ ಇಂದು ಮುಂಜಾನೆ ಜಪಾನ್‌ನಿಂದ ದೆಹಲಿಗೆ ಆಗಮಿಸಿದರು. ಆದರೆ ವಿಶ್ರಾಂತಿಯನ್ನೂ ಪಡೆಯದೆ ಕೂಡಲೇ ಒಂದು ಸಂಪುಟ ಸಭೆ ನಡೆಸಿದ್ದಾರೆ. ಅದರ ಬಳಿಕವೂ ಕೆಲವು ಪ್ರಮುಖ ಮೀಟಿಂಗ್‌ಗಳನ್ನು ನಡೆಸಿದರು ಎಂದು ತಿಳಿಸಿದ್ದಾರೆ.
ಭಾರತ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳನ್ನೊಳಗೊಂಡ ಕ್ವಾಡ್ ಶೃಂಗಸಭೆ ಜಪಾನ್‌ನ ಟೋಕಿಯೋದಲ್ಲಿ ನಡೆದಿತ್ತು. ಕ್ವಾಡ್‌ನ ಮೊದಲ ಸಭೆ 2021ರ ಮಾರ್ಚ್‌ನಲ್ಲಿ ಕೊವಿಡ್ 19 ಕಾರಣದಿಂದ ವರ್ಚ್ಯುವಲ್ ಆಗಿ ನಡೆದಿತ್ತು. ಅದಾದ ಬಳಿಕ 2021ರ ಸೆಪ್ಟೆಂಬರ್‌ನಲ್ಲಿ ಈ ಕ್ವಾಡ್ ನಾಯಕರು ವಾಷಿಂಗ್ಟನ್ ಡಿಸಿಯಲ್ಲಿ ಸಭೆ ಸೇರಿದ್ದರು. ಮತ್ತೆ 2022 ರ ಮಾರ್ಚ್‌ನಲ್ಲೊಮ್ಮೆ ವರ್ಚ್ಯುವಲ್ ಸಭೆ ನಡೆಸಿದ ಬಳಿಕ, ಈಗ ಜಪಾನ್‌ನಲ್ಲಿ ಭೌತಿಕವಾಗಿ ಒಂದೆಡೆ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ , ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸೆ, ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ, ಹಲವು ಜಾಗತಿಕ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಭಾರತದಲ್ಲಿ ಕೊವಿಡ್ 19 ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿಭಾಯಿಸಿದ ಪ್ರಧಾನಿ ಮೋದಿಯವರನ್ನು ಉಳಿದ ಮೂರು ರಾಷ್ಟ್ರಗಳ ನಾಯಕರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಅಪಘಾತ: ಮಡಿದವರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ