ನವದೆಹಲಿ: ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಪರಿಗಣಿಸಬೇಕೋ? ಬೇಡವೋ ಎಂಬುದೊಂದು ಚರ್ಚೆ ದೇಶದಲ್ಲಿ ಆಗಾಗ ಮುನ್ನೆಲೆಗೆ ಬರುತ್ತದೆ. ಇದು ಆರೋಗ್ಯಕರ ಚರ್ಚೆಯಾಗಿರುವ ಬದಲು ಟೀಕೆ, ವ್ಯಂಗ್ಯ, ವಾಗ್ದಾಳಿಯ ಸ್ವರೂಪ ಪಡೆಯುತ್ತದೆ. ಅನೇಕರು ಭಾಷೆ ವಿಚಾರವನ್ನಿಟ್ಟುಕೊಂಡು ವೈಷಮ್ಯ ಪ್ರಚೋದಿಸುವ ಹೇಳಿಕೆಗಳನ್ನು ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಗ್ಗೆ ಇಂದಿನ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪ್ರಸ್ತಾಪ ಮಾಡಿದ್ದಾರೆ. ಜೈಪುರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ವರ್ಚ್ಯುವಲ್ ಆಗಿ ಮಾತನಾಡಿದ ಅವರು, ಭಾಷಾ ವೈವಿಧ್ಯತೆ ಎಂಬುದು ಈ ದೇಶದ ಹೆಮ್ಮೆ. ಆದರೆ ಭಾಷೆಯ ವಿಚಾರವನ್ನೇ ಮುಖ್ಯವಾಗಿಟ್ಟುಕೊಂಡು ವಿವಾದ ಸೃಷ್ಟಿಸುವ ಪ್ರಯತ್ನಗಳು ಇತ್ತೀಚೆಗೆ ಜಾಸ್ತಿಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಈ ದೇಶದಲ್ಲಿರುವ ಪ್ರತಿ ಪ್ರಾದೇಶಿಕ ಭಾಷೆಯೂ ಭಾರತೀಯ ಸಂಸ್ಕೃತಿಯ ಪ್ರತಿಬಿಂಬಕ ಮತ್ತು ಅವೆಲ್ಲವೂ ಗೌರವಾರ್ಹ ಎಂದು ಬಿಜೆಪಿ ಭಾವಿಸುತ್ತದೆ. ಭಾಷಾ ವೈವಿದ್ಯತೆ ದೇಶದ ಭವಿಷ್ಯದೊಂದಿಗೆ ಸಂಪರ್ಕ ಹೊಂದಿರುವ ವಿಚಾರ. ಇದರಲ್ಲೂ ದ್ವೇಷ ಬಿತ್ತುವುದು ಸರಿಯಲ್ಲ. ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ (NEP)ಯಲ್ಲಿ ಪ್ರತಿ ಭಾಷೆಗೂ ಮಹತ್ವ ನೀಡಲಾಗಿದೆ. ಇದು ಪ್ರಾದೇಶಿಕ ಭಾಷೆಯೆಡೆಗಿನ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ: ಮುಂದಿನ ಅವಧಿಗೂ ನಾನೇ ಪ್ರಧಾನಿಯೆಂದು ಪರೋಕ್ಷವಾಗಿ ಹೇಳಿದರಾ ನರೇಂದ್ರ ಮೋದಿ?
ಸಂಸದೀಯ ಅಧಿಕೃತ ಭಾಷೆಗಳ ಸಮಿತಿ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಷಾ ಕಳೆದ ತಿಂಗಳು ಸಮಿತಿಯ ಸದಸ್ಯರಿಗೆ ಹೇಳಿದ್ದ ಒಂದು ಮಾತು ವಿವಾದ ಸೃಷ್ಟಿಸಿತ್ತು. ಕೇಂದ್ರ ಸಂಪುಟದ ಶೇ. 70ರಷ್ಟು ಕಾರ್ಯಸೂಚಿಗಳನ್ನು ಹಿಂದಿಯಲ್ಲೇ ಸಿದ್ಧಪಡಿಸಲಾಗುತ್ತಿದೆ. ದೇಶದ ಏಕತೆ ದೃಷ್ಟಿಯಿಂದ, ಹಿಂದಿಯನ್ನು ಪ್ರಮುಖ ಭಾಷೆಯನ್ನಾಗಿ ಮಾಡುವ ಸಮಯ ಬಂದಿದೆ. ಅಂದರೆ ಎರಡು ಬೇರೆ ರಾಜ್ಯಗಳ, ಪ್ರದೇಶಗಳ ಜನರು ಸಂವಹನ ನಡೆಸುವ ಸಮಯ ಬಂದಾದ ಇಂಗ್ಲಿಷ್‌ನ್ನು ಪ್ರಯೋಗ ಮಾಡುತ್ತಿದ್ದಾರೆ. ದೇಶದಲ್ಲಿ ಇಂಗ್ಲಿಷ್‌ಗೆ ಪರ್ಯಾಯವಾಗಿ ಹಿಂದಿಯನ್ನು ಪರಿಗಣಿಸಬೇಕು ಎಂದು ಹೇಳಿದ್ದರು. ಇದಕ್ಕೆ ದೇಶಾದ್ಯಂತ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡಲು ಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳೂ ಆರೋಪ ಮಾಡಿದ್ದವು. ಮತ್ತೆ ಸ್ಪಷ್ಟನೆ ಕೊಟ್ಟ ಕೇಂದ್ರ ಗೃಹ ಇಲಾಖೆ, ಹಿಂದಿಯನ್ನು ಇಂಗ್ಲಿಷ್ ಭಾಷೆಗೆ ಪರ್ಯಾಯ ಮಾಡಬೇಕು ಎಂದು ಅಮಿತ್ ಷಾ ಹೇಳಿದ್ದಾರೆಯೇ ಹೊರತು, ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಗೆ ಪರ್ಯಾಯ ಎಂದು ಹೇಳಿಲ್ಲ ಎಂಬ ಸ್ಪಷ್ಟನೆಯನ್ನು ಕೊಟ್ಟಿತ್ತು. ಅದರ ಬೆನ್ನಲ್ಲೇ ಪ್ರಧಾನಿ ಮೋದಿ ಇಂದು ತಮ್ಮ ಭಾಷಣದಲ್ಲಿ ಭಾಷಾ ವಿಷಯವನ್ನೂ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನಾವ್ಯಾರೂ ವಿಶ್ರಮಿಸುವಂತಿಲ್ಲ; ಪದಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಮಾತು