Site icon Vistara News

PM Narendra Modi : ಉರೂಸ್‌ ಅಂಗವಾಗಿ ಅಜ್ಮೀರ್‌ ದರ್ಗಾಕ್ಕೆ ಚಾದರ್‌ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ

ಜೈಪುರ: ಪ್ರಖ್ಯಾತ ಸೂಫೀ ಸಂತ ಖ್ವಾಜ ಮಈನುದ್ದೀನ್‌ ಚಿಶ್ತಿ ಅವರ 811ನೇ ಉರೂಸ್‌ ಗುರುವಾರ ನಡೆಯಿತು. ಈ ವಿಶೇಷ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿರುವ ದರ್ಗಾಕ್ಕೆ ಚಾದರವನ್ನು ಕಳುಹಿಸಿ ಕೊಟ್ಟಿದ್ದಾರೆ.


ಚಾದರದೊಂದಿಗೆ ಪತ್ರವೊಂದನ್ನೂ ಕಳುಹಿಸಿಕೊಟ್ಟಿರುವ ಪ್ರಧಾನಿ ದೇಶದಲ್ಲಿನ ಚಿಶ್ತಿ ಅನುಯಾಯಿಗಳಿಗೆ ಉರೂಸ್‌ನ ಶುಭ ಹಾರೈಸಿದ್ದಾರೆ. “ಚಿಶ್ತಿ ಸಾಹೇಬ್‌ ಭಾರತದ ಶ್ರೇಷ್ಠ ಆಧ್ಯಾತ್ಮಿಕ ಸಂಪ್ರದಾಯಗಳ ಸಾಕಾರವಾಗಿದ್ದರು. ಗರೀಬ್ ನವಾಜ್ ಅವರು ಮನುಕುಲಕ್ಕೆ ಮಾಡಿದ ಸೇವೆಯು ಮುಂಬರುವ ಪೀಳಿಗೆಗೆ ಸ್ಫೂರ್ತಿಯಾಗಿರುತ್ತದೆ. ದರ್ಶಿಗಳು, ಪೀರ್‌ಗಳು ಮತ್ತು ಫಕೀರರು ತಮ್ಮ ಶಾಂತಿ, ಸಹಬಾಳ್ವೆ, ಏಕತೆಯ ಸಂದೇಶದ ಮೂಲಕ ದೇಶದ ಸಾಂಸ್ಕೃತಿಕ ಬಂಧವನ್ನು ಗಟ್ಟಿಗೊಳಿಸಿದ್ದಾರೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Padma Awards 2023 : ಮೋದಿ ಪ್ರಧಾನಿ ಆದ ಕಾರಣವೇ ನನಗೆ ಈ ಪ್ರಶಸ್ತಿ ಬಂತು, ಇಲ್ಲದಿದ್ದರೆ ಬರುತ್ತಿರಲಿಲ್ಲ ಅಂದ ಭೈರಪ್ಪ
ಹಾಗೆಯೇ “ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲದಲ್ಲಿರುವಾಗ ಭಾರತೀಯ ನಾಗರಿಕರ ಸಂಯೋಜಿತ ಶಕ್ತಿಯು ರಾಷ್ಟ್ರವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತದೆ” ಎಂದು ಹೇಳಿದ್ದಾರೆ.


ಪ್ರಧಾನಿ ಅವರು ಚಾದರ್‌ ಅನ್ನು ಅಲ್ಪಸಂಖ್ಯಾತ ಸೆಲ್‌ ಅಧ್ಯಕ್ಷ ಜಮಾಲ್‌ ಸಿದ್ದಿಕಿ ಅವರಿಗೆ ಮಂಗಳವಾರ ಹಸ್ತಾಂತರಿಸಿದ್ದರು. ಆ ವೇಳೆ ಅಲ್ಪಸಂಖ್ಯಾತ ಸಚಿವೆ ಸ್ಮೃತಿ ಇರಾನಿ ಅವರೂ ಅವರೊಂದಿಗಿದ್ದರು. ಜಮಾಲ್‌ ಸಿದ್ದಿಕಿ ಅವರು ಚಾದರ್‌ ಅನ್ನು ಅಜ್ಮೀರ್‌ನ ದರ್ಗಾಕ್ಕೆ ಅರ್ಪಿಸಿದ್ದಾರೆ.

Exit mobile version