Site icon Vistara News

Video | ಮಹಾತ್ಮ ಗಾಂಧಿ, ಲಾಲ್​ ಬಹದ್ದೂರ್​ ಶಾಸ್ತ್ರಿ ಜನ್ಮದಿನ; ಮಹಾನ್​ ನಾಯಕರಿಗೆ ಪ್ರಧಾನಿ ಮೋದಿ ಗೌರವ ನಮನ

PM Modi Tribute to Gandhi

ನವ ದೆಹಲಿ: ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರ ಜನ್ಮ ದಿನದ ಪ್ರಯುಕ್ತ ಇಂದು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಮಹಾನ್​ ನಾಯಕರಿಗೆ ಗೌರವ ನಮನ ಸಲ್ಲಿಸಿದರು. ಮೊದಲು ರಾಜ್​ಘಾಟ್​​ನಲ್ಲಿರುವ ಗಾಂಧಿ ಸಮಾಧಿಗೆ ತೆರಳಿ, ಪುಷ್ಪ ಅರ್ಚಿಸಿ ನಮಿಸಿದ ಅವರು, ಬಳಿಕ ವಿಜಯಘಾಟ್​ನಲ್ಲಿ ಶಾಸ್ತ್ತೀಜಿ ಅವರ ಸಮಾಧಿಗೆ ನಮಸ್ಕರಿಸಿದರು.

ಅದಕ್ಕೂ ಮೊದಲು ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ ದೆಹಲಿಯ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿರುವ ಲಾಲ್​ ಬಹದ್ದೂರ್ ಶಾಸ್ತ್ರಿ ಗ್ಯಾಲರಿಯ ನಾಲ್ಕು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಲಾಲ್​ ಬಹದ್ದೂರ್​ ಶಾಸ್ತ್ರಿಯವರ ಜೀವನ, ಪ್ರಧಾನಿಯಾಗಿ ಅವರು ಮಾಡಿದ ಸಾಧನೆಗಳನ್ನು ಸಾರುವ ಅನೇಕ ಲೇಖನಗಳು, ಕಿರುಚಿತ್ರಗಳನ್ನು ಈ ಗ್ಯಾಲರಿ ಒಳಗೊಂಡಿದ್ದು, ಎಲ್ಲರೂ ಒಮ್ಮೆಯಾದರೂ ಮ್ಯೂಸಿಯಂಗೆ ಭೇಟಿ ಕೊಡಿ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಹಾಗೇ ಇನ್ನೊಂದು ಟ್ವೀಟ್ ಮಾಡಿ ‘ಲಾಲ್​ ಬಹದ್ದೂರ್​ ಶಾಸ್ತ್ರಿ ಅವರು ತಮ್ಮ ಸರಳತೆ ಮತ್ತು ಸಮಯೋಚಿತವಾಗಿ ನಿರ್ಧಾರ ತೆಗೆದುಕೊಳ್ಳುವ ಕೌಶಲತೆಯಿಂದಾಗಿ ಎಲ್ಲರಿಂದಲೂ ಗೌರವಕ್ಕೆ ಪಾತ್ರರಾಗಿದ್ದರು. ಇಂದಿಗೂ ನಮ್ಮ ದೇಶದ ಜನರು ಶಾಸ್ತ್ರೀಜಿ ಅವರನ್ನು ಇದೇ ಕಾರಣಕ್ಕೆ ಪ್ರೀತಿಸುತ್ತಾರೆ. ಅವರು ದೇಶದ ಉನ್ನತ ಹುದ್ದೆ ವಹಿಸಿಕೊಂಡಾಗ ದೇಶದಲ್ಲಿ ಒಂದು ನಿರ್ಣಾಯಕ ಸಂದರ್ಭ ಇತ್ತು. ಆ ಸಮಯದಲ್ಲಿ ಅವರು ಮಾಡಿದ ಹೋರಾಟವನ್ನೆಂದೂ ನಾವು ಮರೆಯಲು ಸಾಧ್ಯವಿಲ್ಲ‘ ಎಂದು ಹೇಳಿ, ಶಾಸ್ತ್ರೀಜಿ ಅವರ ಸಾಧನೆಯನ್ನು ಕಟ್ಟಿಕೊಡುವ ಒಂದು ಚಿಕ್ಕ ವಿಡಿಯೋವನ್ನೂ ಶೇರ್​ ಮಾಡಿಕೊಂಡಿದ್ದಾರೆ.

ಮಹಾತ್ಮ ಗಾಂಧಿಯವರ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ’ಭಾರತ ಆಜಾದಿ ಕಾ ಅಮೃತಮಹೋತ್ಸವ (75ನೇ ವರ್ಷದ ಸ್ವಾತಂತ್ರ್ಯೋತ್ಸವ) ಆಚರಣೆ ಮಾಡುತ್ತಿದೆ. ಹೀಗಾಗಿ ಈ ಬಾರಿಯ ಗಾಂಧಿ ಜಯಂತಿ ಕೂಡ ತುಂಬ ವಿಶೇಷ. ಬಾಪೂ ಅವರ ಆದರ್ಶಗಳನ್ನು ನಾವು ಸದಾ ಪಾಲಿಸೋಣ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನೇ ಹೆಚ್ಚಾಗಿ ಖರೀದಿಸೋಣ’ ಎಂದು ಹೇಳಿದರು.

ಹಾಗೇ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್​ ಧನಕರ್​, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಮತ್ತಿತರ ಗಣ್ಯರು ರಾಜ್​ಘಾಟ್​ಗೆ ತೆರಳಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು.

ಗಾಂಧಿ ಹುಟ್ಟಿದ್ದು 1869ರ ಅಕ್ಟೋಬರ್​ 2ರಲ್ಲಿ. ಗುಜರಾತ್​​ನ ಪೋರಬಂದರ್​​ ಪಟ್ಟಣದಲ್ಲಿ ಜನಿಸಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸಾ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಇವರ ಸ್ವರಾಜ್​ ಮತ್ತು ಅಹಿಂಸಾ ತತ್ವಗಳು ಜಾಗತಿಕವಾಗಿ ಮನ್ನಣೆ ಪಡೆದಿವೆ. ಹಾಗೇ, ಲಾಲ್​ ಬಹದ್ದೂರ್ ಶಾಸ್ತ್ರಿ ಅವರು 1904ರ ಅಕ್ಟೋಬರ್​ 2ರಂದು ಉತ್ತರ ಪ್ರದೇಶದಲ್ಲಿ ಜನಿಸಿದ್ದಾರೆ. ಇವರು ಭಾರತದ ಎರಡನೇ ಪ್ರಧಾನಿಯಾಗಿ 1964ರಿಂದ 1966ರವರೆಗೆ ಕಾರ್ಯ ನಿರ್ವಹಿಸಿದರು. 1966ರ ಜನವರಿ 11ರಂದು ತಾಷ್ಕೆಂಟ್​​ನಲ್ಲಿ, 61ನೇ ವರ್ಷದಲ್ಲಿ ಮೃತಪಟ್ಟಿದ್ದಾರೆ. ಇವರ ಸಾವಿನ ಬಗ್ಗೆ ಇನ್ನೂ ಹಲವು ಅನುಮಾನಗಳು ಇವೆ.

ಇದನ್ನೂ ಓದಿ: Sunday Read | ಗಾಂಧಿ ಜಯಂತಿ | ಗಾಂಧಿ ರಾಜಕೀಯದ ಮರು ಮೌಲ್ಯಮಾಪನ

Exit mobile version