Site icon Vistara News

ಕೆಲವೇ ಹೊತ್ತಲ್ಲಿ ರಾಜ್ಯಕ್ಕೆ ಮೋದಿ ಆಗಮನ; 20 ತಾಸಲ್ಲಿ 10 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ

Narendra Modi

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ದಣಿವರಿಯದ ನಾಯಕ ಎಂಬುದನ್ನೂ ಅನೇಕ ಬಾರಿ ಸಾಬೀತು ಮಾಡಿದ್ದಾರೆ. ವಿಶ್ರಾಂತಿಯಲ್ಲದ ಬದಕು ಅವರದ್ದು. ಸಮಯ ಹಾಳು ಮಾಡಬಾರದು ಎಂದು ಹೊರದೇಶಗಳಿಗೆ ಹೋಗುವಾಗಲೂ ಹೆಚ್ಚಾಗಿ ರಾತ್ರಿ ಪ್ರಯಾಣವನ್ನೇ ಮಾಡುತ್ತಾರೆ. ಸಾಲುಸಾಲು ಸಭೆ-ದ್ವಿಪಕ್ಷೀಯ ಮಾತುಗಳನ್ನು ನಡೆಸಿ ವಾಪಸ್‌ ಬಂದ ಮೇಲೆ ಕೂಡ ವಿಶ್ರಾಂತಿ ಪಡೆಯದೆ ತಮ್ಮ ಮುಂದಿನ ಕಾಯಕದಲ್ಲಿ ತೊಡಗುತ್ತಾರೆ. ಹಾಗೇ, ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನಾಳೆ ಮೈಸೂರಿಗೆ ತೆರಳಿ ಯೋಗದಿನದಲ್ಲಿ ಭಾಗವಹಿಸುವರು. ಒಟ್ಟು 20 ತಾಸುಗಳಲ್ಲಿ 10 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕ ಸಭೆಗಳನ್ನೂ ನಡೆಸಲಿದ್ದಾರೆ. ಈ ಬಿಡುವಿಲ್ಲದ ಶೆಡ್ಯೂಲ್‌ನಿಂದಾಗಿ ಅವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಹೆಲಿಕಾಪ್ಟರ್‌ ಬಳಸಲಿದ್ದಾರೆ.

ಇಂದು (ಜೂ.20) ಮಧ್ಯಾಹ್ನ ಸುಮಾರು 11.20ಕ್ಕೆ ಪ್ರಧಾನಿ ಮೋದಿ ಬೆಂಗಳೂರು ತಲುಪಲಿದ್ದು, ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಕ್ಯಾಂಪಸ್‌ಗೆ ತೆರಳಿ, ಬ್ರೇನ್‌ ರಿಸರ್ಚ್‌ ಕೇಂದ್ರ ಉದ್ಘಾಟಿಸಲಿದ್ದಾರೆ. ನಂತರ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಕೆಂಗೇರಿ ಬಳಿಯ ಕೊಮ್ಮಘಟ್ಟದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಡಾ. ಬಿ.ಆರ್.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ (BASE) ಕ್ಯಾಂಪಸ್‌ನಲ್ಲಿ ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿಯನ್ನು ಉದ್ಘಾಟಿಸಿ, ಈ ಯೂನಿವರ್ಸಿಟಿ ಕ್ಯಾಂಪಸ್‌ನ್ನು ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ. ಅದರೊಂದಿಗೆ ಮೇಲ್ದರ್ಜೆಗೇರಿಸಿದ ಕರ್ನಾಟಕ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಲೋಕಾರ್ಪಣೆಗೊಳಿಸುವರು.

ಇದನ್ನೂ ಓದಿ: ಕರ್ನಾಟಕದಲ್ಲಿ ನರೇಂದ್ರ ಮೋದಿ ಪ್ರವಾಸದ Complete Details ಇಲ್ಲಿದೆ

ಸಂಜೆ ಹೊತ್ತಿಗೆ ಮೈಸೂರಿಗೆ ತೆರಳಿ ಮಹಾರಾಜಾ ಕಾಲೇಜಿನ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಸಂಜೆ 7ಗಂಟೆ ಹೊತ್ತಿಗೆ ಸುತ್ತೂರು ಮಠಕ್ಕೆ ಭೇಟಿ ಕೊಡಲಿದ್ದಾರೆ. ನಂತರ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿ ಆಶೀರ್ವಾದ ಪಡೆಯಲಿದ್ದಾರೆ. ಜೂ.21ರಂದು ಮೈಸೂರಿನಲ್ಲಿ ಅರಮನೆ ಎದುರು ಸುಮಾರು 15 ನಿಮಿಷ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವರು. ನಂತರ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡು, ನಾಳೆ 9.20ರ ಹೊತ್ತಿಗೆ ಮೈಸೂರಿನಿಂದ ದೆಹಲಿಗೆ ಹೋಗಲಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಉದ್ಘಾಟಿಸಲಿರುವ ʼಬೇಸ್‌ʼ ಕ್ಯಾಂಪಸ್‌ ಸಂಪೂರ್ಣ ವಿವರ ಇಲ್ಲಿದೆ

Exit mobile version