Site icon Vistara News

ಹಿಂದುಳಿದ ವರ್ಗದವರ ಪಾಲಿಗಿಂದು ಪರ್ವಕಾಲ; ದ್ರೌಪದಿ ಮುರ್ಮುಗೆ ಶುಭ ಕೋರಿದ ಪ್ರಧಾನಿ

PM Narendra Modi Wishes new President Draupadi Murmu

ನವ ದೆಹಲಿ: ಭಾರತದ 15ನೇ ರಾಷ್ಟ್ರಪತಿಯಾಗಿ ಇಂದು ಅಧಿಕೃತವಾಗಿ ನೇಮಕಗೊಂಡ ದ್ರೌಪದಿ ಮುರ್ಮು ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಶುಭಕೋರಿದರು. ಮುರ್ಮು ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಟ್ವೀಟ್‌ ಮಾಡಿದ ಅವರು, ʼದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ದನ್ನು ಇಂದು ಇಡೀ ದೇಶ ತುಂಬ ಹೆಮ್ಮೆಯಿಂದ ನೋಡಿದೆ. ಅವರು ಹುದ್ದೆಗೆ ಏರಿದ ಕ್ಷಣ ಇಡೀ ದೇಶಕ್ಕೆ ಅದರಲ್ಲೂ ಬಡ ಮತ್ತು ಹಿಂದುಳಿದ ವರ್ಗದವರ ಪಾಲಿಗೆ ಒಂದು ಪರ್ವಕಾಲವಾಗಿತ್ತು. ರಾಷ್ಟ್ರಪತಿಯಾಗಿ ಅವರ ಆಳ್ವಿಕೆ ಫಲಪ್ರದವಾಗಿರಲಿ ಎಂದು ನಾನು ಹಾರೈಸುತ್ತೇನೆʼ ಎಂದು ಹೇಳಿದ್ದಾರೆ.

ಗೃಹಸಚಿವ ಅಮಿತ್‌ ಶಾ ಟ್ವೀಟ್‌ ಮಾಡಿ, ʼ15ನೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳು. ನಿಮ್ಮ ಅಧಿಕಾರ ಅವಧಿಯಲ್ಲಿ ರಾಷ್ಟ್ರದ ಗೌರವ ಇನ್ನಷ್ಟು ಎತ್ತರಕ್ಕೆ ಏರಲಿದೆ ಎಂಬ ಭರವಸೆ ನನಗಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಪಾಲಿಸುವ ಸಮಾಜದ ಪ್ರತಿಯೊಂದು ವಿಭಾಗದ ಸಬಲೀಕರಣ ಮತ್ತು ಅಂತ್ಯೋದಯಕ್ಕೆ ಈ ಐತಿಹಾಸಿಕ ದಿನ ಸಾಕ್ಷಿ ಎಂದು ಹೇಳಿದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಟ್ವೀಟ್‌ ಮಾಡಿ, ಭಾರತ ಗಣರಾಜ್ಯದಲ್ಲಿ ಇಂದು ಐತಿಹಾಸಿಕ ದಿನ. ರಾಷ್ಟ್ರದ 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳು. ಅವರಲ್ಲಿರುವ ಅಪಾರ ಆಡಳಿತಾತ್ಮಕ ಮತ್ತು ಶಾಸಕಾಂಗ ಅನುಭವ ದೇಶಕ್ಕೆ ವರದಾನವಾಗಲಿದೆ ಎಂಬ ನಂಬಿಕೆ ಇದೆ. ಮುರ್ಮುಜಿಗೆ ಶುಭ ಹಾರೈಕೆಗಳು ಎಂದು ಹೇಳಿದರು.

‘ದ್ರೌಪದಿ ಮುರ್ಮು ಇಂದು ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಭಾಷಣ ಮಾಡುತ್ತ ತಮ್ಮ ಹಳ್ಳಿಯ ದಿನಗಳ ಜೀವನ ನೆನಪು ಮಾಡಿಕೊಂಡರು. ಭಾರತ ಮಾತೆ ತನ್ನೆಲ್ಲ ಹೆಣ್ಣುಮಕ್ಕಳಿಂದ ಶಕ್ತಿಯನ್ನು ಸೆಳೆದುಕೊಳ್ಳುತ್ತಿದ್ದಾಳೆ ಮತ್ತು ಅಮೃತಕಾಲಕ್ಕಾಗಿ ಅಂತರ್ಗತ ಭಾರತ ಸಜ್ಜಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್‌ ಮಾಡಿದ್ದಾರೆ.

ಹಾಗೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಟ್ವೀಟ್‌ ಮಾಡಿ, ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳು. ಇಂದು ಪ್ರಜಾಪ್ರಭುತ್ವಕ್ಕೆ ಸಂಭ್ರಮ ತಂದ ದಿನ. ದ್ರೌಪದಿ ಮುರ್ಮು ಅವರು ಸಾರ್ವಜನಿಕ ಜೀವನಲ್ಲಿ ಮುರ್ಮು ಹೊಂದಿರುವ ಅಪಾರ ಅನುಭವ ದೇಶದ ಪ್ರಗತಿಗೆ ಬಹುಮುಖ್ಯ ಎಂದು ಹೇಳಿದರು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿ ಅನೇಕ ಗಣ್ಯರು ಇಂದು ದ್ರೌಪದಿ ಮುರ್ಮುರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Draupadi Murmu Oath Ceremony| ರಾಜ್‌ಘಾಟ್‌ನಲ್ಲಿ ಗಾಂಧೀಜಿಗೆ ನಮನ ಸಲ್ಲಿಸಿದ ದ್ರೌಪದಿ ಮುರ್ಮು

Exit mobile version