ನವ ದೆಹಲಿ: 2022ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ಗೆ ಭೇಟಿಕೊಟ್ಟಿದ್ದಾಗ ಅವರ ಭದ್ರತೆಯಲ್ಲಿ ದೊಡ್ಡಮಟ್ಟದಲ್ಲಿ ಉಲ್ಲಂಘನೆಯಾಗಿತ್ತು (PM Security Breach). ಆ ಘಟನೆಗೆ ಸಂಬಂಧಪಟ್ಟಂತೆ ಈಗ ಪಂಜಾಬ್ ಮಾಜಿ ಡಿಜಿಪಿ (Director General of Police) ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಮತ್ತು ಇತರ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ/ದಂಡ ವಿಧಿಸಲು ಆದೇಶಿಸಿದ್ದಾರೆ. ಶಿಸ್ತುಕ್ರಮದ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸುವಂತೆ ಸಿಎಂ ಹೇಳಿದ್ದಾರೆ.
ಪಂಜಾಬ್ ಏರ್ಪೋರ್ಟ್ಗೆ ಬಂದಿಳಿದಿದ್ದ ಪ್ರಧಾನಿ ನರೇಂದ್ರ ಮೋದಿ, ಬಟಿಂಡಾದಿಂದ ಫಿರೋಜ್ಪುರಕ್ಕೆ ಹೆಲಿಕಾಪ್ಟರ್ನಲ್ಲಿ ತೆರಳಬೇಕಿತ್ತು. ಆದರೆ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಅವರ ಕಾರು ಮೇಲ್ಸೇತುವೆಯೊಂದರ ಮೇಲೆ 20 ನಿಮಿಷ ನಿಲ್ಲುವಂತಾಗಿತ್ತು. ಈ ಮೇಲ್ಸೇತುವೆ ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ 30 ಕಿಮೀ ದೂರದಲ್ಲಿ ಇತ್ತು. ಹೀಗೆ ಮೇಲ್ಸೇತುವೆ ಮೇಲೆ 20 ನಿಮಿಷ ನಿಂತ ಬಳಿಕ ಅವರು ದೆಹಲಿಗೆ ವಾಪಸ್ ಆಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಉಲ್ಲಂಘನೆಯಾದ ಬೆನ್ನಲ್ಲೇ, ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್, ಶಿವಸೇನೆ ಮತ್ತು ಇನ್ನಿತರ ಪಕ್ಷಗಳ ಮುಖಂಡರೂ ಘಟನೆಯನ್ನು ವಿರೋಧಿಸಿದ್ದರು.
ಸುಪ್ರೀಂಕೋರ್ಟ್ ಕೂಡ ಕಾನೂನು ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿತ್ತು. ಅಷ್ಟೇ ಅಲ್ಲ, ಈ ಭದ್ರತಾ ಉಲ್ಲಂಘನೆ ಬಗ್ಗೆ ತನಿಖೆ ನಡೆಸಲು ಐವರು ಸದಸ್ಯರನ್ನೊಳಗೊಂಡ ಸಮಿತಿಯನ್ನೂ ರಚಿಸಿತ್ತು. ಫಿರೋಜ್ಪುರ ಹಿರಿಯ ಸೂಪರಿಟೆಂಡೆಂಟ್ನನ್ನೂ ತರಾಟೆಗೆ ತೆಗೆದುಕೊಂಡಿತ್ತು. ಈಗ ಹೊಸದಾಗಿ ಶಿಸ್ತುಕ್ರಮದ ಪ್ರಕ್ರಿಯೆಗಳನ್ನು ಶುರು ಮಾಡುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆದೇಶ ನೀಡಿದ್ದಾರೆ. ಚಟ್ಟೋಪಾಧ್ಯಯ ಅವರ ಜತೆ, ಆಗಿನ ಫಿರೋಜ್ಪುರ ವಲಯದ ಡಿಐಜಿಯಾಗಿದ್ದ ಇಂದ್ರಬೀರ್ ಸಿಂಗ್, ಫಿರೋಜ್ಪುರದ ಆಗಿನ ಹಿರಿಯ ಎಸ್ಎಸ್ಪಿ ಹರ್ಮಂದೀಪ್ ಸಿಂಗ್ ಹನ್ಸ್ ಅವರ ವಿರುದ್ಧವೂ ಶಿಸ್ತುಕ್ರಮ ಜರುಗಲಿದೆ. ಹಾಗೇ, ಪ್ರತಿಕ್ರಿಯೆ ಸಲ್ಲಿಸುವಂತೆ ಈ ಮೂವರ ಬಳಿ ಕೇಳಲಾಗಿದೆ.
ಇನ್ನು ಆಗಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ನರೇಶ್ ಅರೋರಾ, ಸೈಬರ್ ಕ್ರೈಂ ಎಡಿಜಿಪಿ ಜಿ.ನಾಗೇಶ್ವರ್ ರಾವ್, ಪಟಿಯಾಲಾ ವಲಯದ ಐಜಿಪಿಯಾಗಿದ್ದ ಮುಖವಿಂದರ್ ಸಿಂಗ್ ಛಿನಾ, ಆಗಿನ ಕೌಂಟರ್ ಇಂಟೆಲಿಜೆನ್ಸ್ ಐಜಿ ಮತ್ತು ನೋಡಲ್ ಅಧಿಕಾರಿಯಾಗಿದ್ದ ರಾಕೇಶ್ ಅಗರ್ವಾಲ್, ಫರೀದ್ಕೋಟ್ನ ಡಿಐಜಿಯಾಗಿದ್ದ ಸುರ್ಜೀತ್ ಸಿಂಗ್, ಮೋಗಾದ ಅಂದಿನ ಎಸ್ಎಸ್ಪಿಯಾಗಿದ್ದ ಚರಣಜಿತ್ ಸಿಂಗ್ ಅವರಿಂದಲೂ ಘಟನೆ ಬಗ್ಗೆ ವಿವರ ಕೇಳಲು ಮುಖ್ಯಮಂತ್ರಿ ಭಗವಂತ್ ಮಾನ್ ಆದೇಶ ನೀಡಿದ್ದಾರೆ ಎಂದು ಪಂಜಾಬ್ ಗೃಹ ವ್ಯವಹಾರಗಳ ಇಲಾಖೆಯ ಸಂವಹನ ವಿಭಾಗದಿಂದ ಮಾಹಿತಿ ಲಭ್ಯವಾಗಿದೆ. ಸುಪ್ರೀಂಕೋರ್ಟ್ ರಚಿಸಿದ್ದ ಸಮಿತಿಯಲ್ಲಿ ಇವರೆಲ್ಲರ ಹೆಸರುಗಳೂ ಇದ್ದರೂ, ಯಾಕೆ ಇವರ ವಿರುದ್ಧ ಕ್ರಮ ವಹಿಸಲಿಲ್ಲ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.