Site icon Vistara News

ಅನಾರೋಗ್ಯಪೀಡಿತನನ್ನು ತಳ್ಳುವ ಗಾಡಿಯಲ್ಲಿಟ್ಟು ಸಾಗಿದ ವರದಿ ಮಾಡಿದ ಪತ್ರಕರ್ತರ ವಿರುದ್ಧ ಕೇಸ್​ ದಾಖಲು !

Madhya Pradesh

ಭೋಪಾಲ್​: ವಯಸ್ಸಾದ ವ್ಯಕ್ತಿಯೊಬ್ಬನನ್ನು ಅವರ ಕುಟುಂಬದವರು ಕೈಗಾಡಿಯ ಮೇಲೆ ಮಲಗಿಸಿ, ಅದನ್ನು ತಳ್ಳುತ್ತ ಆಸ್ಪತ್ರೆಗೆ ಕರೆದುಕೊಂಡು ಹೋದ ವಿಡಿಯೋವನ್ನು ಬಿತ್ತರಿಸಿ, ವರದಿ ಮಾಡಿದ ಮೂವರು ಪತ್ರಕರ್ತರ ವಿರುದ್ಧ ವಂಚನೆ, ದ್ವೇಷವನ್ನು ಉತ್ತೇಜಿಸಿದ ಆರೋಪದಡಿ ಪ್ರಕರಣ ದಾಖಲಾದ ಘಟನೆ ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ದಾಬೋಹ್ ಪಟ್ಟಣದ ಬಳಿ ಲಹಾರ್ ನಡೆದಿದೆ. ಐಟಿ ಕಾಯ್ದೆಯಡಿ ಎಫ್​ಐಆರ್​ ದಾಖಲು ಮಾಡಲಾಗಿದ್ದು, ಪತ್ರಕರ್ತರ ವರದಿ ಸುಳ್ಳು ಮತ್ತು ಆಧಾರರಹಿತ ಎಂದು ಹೇಳಲಾಗಿದೆ. ಆದರೆ ಆ ವ್ಯಕ್ತಿಯ ಕುಟುಂಬದವರು ಹೇಳುವ ಪ್ರಕಾರ, ಪತ್ರಕರ್ತರ ವರದಿ ಸರಿಯಾಗಿಯೇ ಇದೆ. ವಿಡಿಯೋ ಕೂಡ ನಿಜವಾದದ್ದೇ.

ಒಬ್ಬ ವಯಸ್ಸಾದ, ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯನ್ನು ಆತನ ಮನೆಯವರು ತಳ್ಳುವ ಗಾಡಿಯಲ್ಲಿ ಮಲಗಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋದೊಂದಿಗೆ ವರದಿ ಪ್ರಸಾರವಾಗಿತ್ತು. ಈ ವರದಿ ಬಂದ ಬೆನ್ನಲ್ಲೇ ಕಂದಾಯ ಮತ್ತು ಆರೋಗ್ಯ ಇಲಾಖೆಯ ಒಂದು ತಂಡ ತನಿಖೆ ನಡೆಸಿತ್ತು. ಬಿಂದ್​ ಜಿಲ್ಲಾಧಿಕಾರಿ ಸತೀಶ್​ ಕುಮಾರ್​ ಎಸ್​ ರಚಿಸಿದ್ದ ಈ ತಂಡ ಪರಿಶೀಲನೆ ಬಳಿಕ ವರದಿ ನೀಡಿ, ‘ಆ ವಯಸ್ಸಾದ ವ್ಯಕ್ತಿಯ ಹೆಸರು ಜ್ಞಾನ ಪ್ರಸಾದ್ ವಿಶ್ವಕರ್ಮ. ಅವರನ್ನು ಆಸ್ಪತ್ರೆಗೆ ದಾಖಲಿಸಲು ಮನೆಯವರು ಆ್ಯಂಬುಲೆನ್ಸ್​ಗೆ ಕರೆ ಮಾಡಲೇ ಇಲ್ಲ. ಅಷ್ಟಕ್ಕೂ ಅವರು ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ಇಲ್ಲ’ ಎಂದು ಹೇಳಿತ್ತು. ಅದರ ಬೆನ್ನಲ್ಲೇ ಈ ವರದಿ ಪ್ರಕಟಿಸಿದ್ದ ಕುಂಜಬಿಹಾರಿ ಕೌರವ್, ಅನಿಲ್ ಶರ್ಮಾ ಮತ್ತು ಎನ್.ಕೆ.ಭಟೆಲೆ ವಿರುದ್ಧ ಕೇಸ್​ ದಾಖಲಾಗಿದೆ. ದಾಬೋ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೀವ್​ ಕೌರವ್​ ನೀಡಿದ ದೂರಿನ ಆಧಾರದಲ್ಲಿ ಕೇಸ್​ ಹಾಕಲಾಗಿದೆ.

ಆದರೆ ಆ ಅನಾರೋಗ್ಯಕ್ಕೀಡಾದ ವ್ಯಕ್ತಿಯ ಪುತ್ರ ಹರಿಕೃಷ್ಣ ಮತ್ತು ಮಗಳು ಪುಷ್ಪಾ, ಪತ್ರಕರ್ತರ ವರದಿಯಲ್ಲಿ ಇರುವುದೇ ಸತ್ಯ ಎಂದು ಪ್ರತಿಪಾದಿಸಿದ್ದಾರೆ. ನಾವು ಆ್ಯಂಬುಲೆನ್ಸ್​​ಗೆ ಕರೆ ಮಾಡಿದ್ದೇವೆ. ಆದರೆ ಬರಲಿಲ್ಲ. ಹೀಗಾಗಿ ತಂದೆಯವರನ್ನು ತಳ್ಳುವ ಗಾಡಿಯಲ್ಲಿ ಇಟ್ಟು ಸುಮಾರು 5 ಕಿಮೀ ದೂರ ತಳ್ಳಿಕೊಂಡೆ ಹೋಗಿದ್ದೇವೆ ಎಂದಿದ್ದಾರೆ. ಹಾಗೇ, ‘ಘಟನೆ ನಡೆದ ಬೆನ್ನಲ್ಲೇ ಒಂದಷ್ಟು ಆಡಳಿತಾಧಿಕಾರಿಗಳು ನಮ್ಮ ಮನೆಗೆ ಬಂದು, ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡಿದ್ದಾರೆ’ ಎಂದೂ ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ಯಾವುದೇ ಸ್ಪಷ್ಟನೆಯೂ ಬಂದಿಲ್ಲ.

ಇದನ್ನೂ ಓದಿ: Viral Video | ಕೊಲೆ ಕೇಸ್ ಭೇದಿಸಲು ಅಧ್ಯಾತ್ಮ ಗುರುವಿನ ಸಹಾಯ ಕೇಳಿದ ಪೊಲೀಸ್‌ ಅಧಿಕಾರಿ, ಮುಂದೇನಾಯಿತು?

Exit mobile version