ಉತ್ತರ ಪ್ರದೇಶದ (Uttar Pradesh) ರಾಂಪುರದ ಮಿಲಕ್ ಗ್ರಾಮದಲ್ಲಿ ಮಧ್ಯರಾತ್ರಿ ದಾಟುತ್ತಿದ್ದಂತೆ ಬೆತ್ತಲೆಯಾಗಿ ಬಂದು ಹಲವು ಮನೆಗಳ ಬಾಗಿಲು ಬಡಿಯುವ ಯುವತಿಯ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ. ರಾಂಪುರದಲ್ಲಿ ಯುವತಿಯೊಬ್ಬಳು ಸುಮಾರು ಪ್ರತಿದಿನ ರಾತ್ರಿ ಬೆತ್ತಲೆಯಾಗಿ ರಸ್ತೆ ಮೇಲೆ ಓಡಾಡುವ, ಕಂಡಕಂಡ ಮನೆಯ ಬಾಗಿಲು ಬಡಿಯುವ, ಕಾಲಿಂಗ್ ಬೆಲ್ ಒತ್ತುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿತ್ತು. ವಿಡಿಯೊ ನೋಡಿದ ಹಲವು ಆಕ್ಷೇಪ ವ್ಯಕ್ತಪಡಿಸಿದ್ದರು. ಪೊಲೀಸರು ಏನು ಮಾಡುತ್ತಿದ್ದಾರೆ? ಈ ಯುವತಿ ರಾತ್ರಿ ಸಮಯದಲ್ಲಿ ಹೀಗೆ ಬೆತ್ತಲೆಯಾಗಿ ಓಡಾಡುತ್ತಿದ್ದರೆ ಆಕೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಅಷ್ಟಕ್ಕೂ ಯಾರವಳು? ಎಂಬಿತ್ಯಾದಿ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಾರಂಭವಾಗಿದ್ದವು.
ಇದೀಗ ಯುವತಿ ಯಾರೆಂದು ಪತ್ತೆ ಹಚ್ಚಿದ್ದಾಗಿ ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ. ಯುವತಿ ಮೈಮೇಲೆ ಬಟ್ಟೆಯಿಲ್ಲದೆ ಓಡಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿ, ಅದೇ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜನವರಿ 29ರಂದು ಸಹ ಸ್ಥಳೀಯ ನಿವಾಸಿಯೊಬ್ಬರು ಈ ಬಗ್ಗೆ ದೂರು ಕೊಟ್ಟಿದ್ದರು. ಅದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಪೊಲೀಸರು, ‘ನಾವು ಯುವತಿ ಯಾರೆಂದು ಪತ್ತೆ ಮಾಡುತ್ತೇವೆ. ಆದರೆ ಹೀಗೆ ಮಧ್ಯರಾತ್ರಿ ಬಂದು ಆಕೆ ಯಾರದ್ದೇ ಮನೆ ಬಾಗಿಲು ಬಡಿದರೂ, ಬಾಗಿಲು ತೆರೆದು ಮೊದಲು ಆಕೆಯ ಮೈಮೇಲೆ ಬಟ್ಟೆ ಹೊದೆಸಿ. ನಂತರ ನಮ್ಮನ್ನು ಕರೆಯಿರಿ’ ಎಂದು ಹೇಳಿದ್ದರು.
ಇದನ್ನೂ ಓದಿ: ಗರ್ಭಿಣಿ ನೀನು, ಚೆನ್ನಾಗಿರಬೇಕು ಎನ್ನುತ್ತ ಪತ್ನಿಗೆ ಎಚ್ಐವಿ ಸೋಂಕಿನ ರಕ್ತ ಇಂಜೆಕ್ಟ್ ಮಾಡಿಸಿದ ಪತಿ; ನಂಬಿ ಮೋಸ ಹೋದ ಹೆಂಡತಿ
ಅದರಂತೆ ಆಕೆಯ ಗುರುತು ಪತ್ತೆ ಮಾಡಿದ ಪೊಲೀಸರು ‘ಯುವತಿ ರಾಂಪುರದವಳೇ ಆಗಿದ್ದಾಳೆ. ಆಕೆ ಮಾನಸಿಕ ಅಸ್ವಸ್ಥಳು. ಈ ಬಗ್ಗೆ ಅವಳ ಪಾಲಕರ ಜತೆ ಮಾತುಕತೆ ನಡೆಸಲಾಗಿದೆ. ಇನ್ನುಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಪಾಲಕರು ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ.