Site icon Vistara News

ಮೇಘಾಲಯ ಬಿಜೆಪಿ ರಾಜ್ಯ ಉಪಾಧ್ಯಕ್ಷನ ವೇಶ್ಯಾಗೃಹದ ಮೇಲೆ ಪೊಲೀಸ್‌ ದಾಳಿ; 6 ಮಕ್ಕಳ ರಕ್ಷಣೆ

Meghalaya BJP

ಶಿಲ್ಲಾಂಗ್‌: ಮೇಘಾಲಯ ರಾಜ್ಯ ಬಿಜಪಿ ಉಪಾಧ್ಯಕ್ಷ ಬರ್ನಾರ್ಡ್ ಎನ್ ಮರಕ್ ರಿಂಪು ಮಾಲೀಕತ್ವದ ವೇಶ್ಯಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿದ್ದ 6 ಮಕ್ಕಳನ್ನು ರಕ್ಷಿಸಲಾಗಿದ್ದ, 73ಮಂದಿಯನ್ನು ಬಂಧಿಸಿದ್ದಾರೆ. ಈ ವೇಶ್ಯಾಗೃಹ ನೋಡಲು ಥೇಟ್‌ ಒಂದು ಫಾರ್ಮ್‌ಹೌಸ್‌ನಂತೆ ಇದ್ದು, ಅದಕ್ಕೆ ರಿಂಪು ಬಾಗನ್‌ ಎಂದು ಹೆಸರಿಡಲಾಗಿದೆ. ಪಶ್ಚಿಮ ಗಾರೋ ಹಿಲ್‌ ಜಿಲ್ಲೆಯ ತುರಾ ಎಂಬಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ವೇಶ್ಯಾವೃತ್ತಿ ನಡೆಯುತ್ತಿದೆ ಎಂಬ ಖಚಿತ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದೆವು ಎಂದು ಜಿಲ್ಲಾ ಎಸ್‌ಪಿ ವಿವೇಕಾನಂದ ಸಿಂಗ್‌ ತಿಳಿಸಿದ್ದಾರೆ.

ʼನಾವು ಒಟ್ಟು ಆರು ಮಕ್ಕಳನ್ನು ರಕ್ಷಣೆ ಮಾಡಿದ್ದೇವೆ. ಅದರಲ್ಲಿ ನಾಲ್ವರು ಬಾಲಕರು, ಇಬ್ಬರು ಹುಡುಗಿಯರು ಸೇರಿದ್ದಾರೆ. ರಿಂಪು ಬಾಗನ್‌ ಫಾರ್ಮ್‌ಹೌಸ್‌ನ ಒಂದು ಕೊಳಕಾದ ಕೋಣೆಯಲ್ಲಿ ಇವರನ್ನೆಲ್ಲ ಕೂಡಿಡಲಾಗಿತ್ತು. ಇವರನ್ನೆಲ್ಲ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ (ಡಿಸಿಪಿಒ) ಸುಪರ್ಧಿಗೆ ಕೊಡಲಾಗಿದೆ. ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆʼ ಎಂದೂ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಫಾರ್ಮ್‌ಹೌಸ್‌ನಲ್ಲಿದ್ದ 27 ಗಾಡಿಗಳು, ಎಂಟು ಬೈಕ್‌ಗಳು, 400ಕ್ಕೂ ಹೆಚ್ಚು ಮದ್ಯದ ಬಾಟಲಿಗಳು, 500 ಕಾಂಡೋಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಧ್ಯರಾತ್ರಿ ಹೊತ್ತಿಗೆ ಅಲ್ಲಿಗೆ ಫಾರ್ಮ್‌ಹೌಸ್‌ಗೆ ಹೋದಾಗ ಅಲ್ಲಿ ಅನೇಕ ಪುರುಷರು-ಮಹಿಳೆಯರು ಅರೆಬೆತ್ತಲಾಗಿದ್ದರು. ಕಂಠ ಪೂರ್ತಿ ಕುಡಿದು ಅಮಲಲ್ಲಿ ತೇಲಾಡುತ್ತಿದ್ದರು. ಈ ಫಾರ್ಮ್‌ಹೌಸ್‌ನಲ್ಲಿ ಒಟ್ಟು 30 ಕೊಠಡಿಗಳಿದ್ದು, ಪ್ರತಿ ಕೋಣೆಯನ್ನೂ ಶೋಧಿಸಲಾಗಿದೆ. ಇಲ್ಲಿ ವೇಶ್ಯಾವೃತ್ತಿಯೇ ನಡೆಯುತ್ತಿತ್ತು ಎಂಬುದಕ್ಕೆ ಕೊಠಡಿಯಲ್ಲಿ ಸಿಕ್ಕ ಪ್ರತಿವಸ್ತುಗಳೂ ಸಾಕ್ಷಿ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ಫಾರ್ಮ್‌ಹೌಸ್‌ನ ಮ್ಯಾನೇಜರ್‌, ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮತ್ತು ಮೂವರು ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ಎನ್ ಮರಕ್ ರಿಂಪು ಅವರಿಗೂ ಶರಣಾಗಿ ವಿಚಾರಣೆಗೆ ಬರುವಂತೆ ಹೇಳಿದ್ದೇವೆ. ಆದರೆ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: Flood effects | ಭೀಕರ ಮಳೆಗೆ ನಲುಗಿದ ಅಸ್ಸಾಂ, ಮೇಘಾಲಯ: ಪ್ರವಾಹಕ್ಕೆ ಸಿಲುಕಿ 31 ಮಂದಿ ಸಾವು

Exit mobile version