ಲಖನೌ: ಮಹಿಳೆಯೊಬ್ಬರನ್ನು ನಿಂದಿಸಿ-ಹಲ್ಲೆ ಮಾಡಿ ನಾಪತ್ತೆಯಾಗಿರುವ ಉತ್ತರ ಪ್ರದೇಶ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ (Shreekant Tyagi) ಪತ್ನಿಗೂ ಈಗ ಸಂಕಷ್ಟ ಎದುರಾಗಿದೆ. ಶ್ರೀಕಾಂತ್ ತ್ಯಾಗಿ ನಾಪತ್ತೆಯಾಗಿದ್ದರಿಂದ, ಅವರ ಪತ್ನಿಯನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಶ್ರೀಕಾಂತ್ ತ್ಯಾಗಿ ತಾನು ಬಿಜೆಪಿಯ ನಾಯಕ ಎಂದು ಹೇಳಿಕೊಂಡಿದ್ದ. ನೊಯ್ಡಾದ ಸೆಕ್ಟರ್ 93ಬಿನಲ್ಲಿ, ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ ಆರೋಪ ಎದುರಿಸುತ್ತಿದ್ದಾರೆ.
ಶ್ರೀಕಾಂತ್ ತ್ಯಾಗಿ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಗ್ರ್ಯಾಂಡ್ ಒಮ್ಯಾಕ್ಸ್ ಸೊಸೈಟಿ ಎದುರು ಆತ ಅಕ್ರಮವಾಗಿ ಕಟ್ಟಿಸಿದ್ದ ಮನೆಯೊಂದರನ್ನು ಬುಲ್ಡೋಜರ್ ಬಿಟ್ಟು ಪುಡಿಮಾಡಲಾಗಿದೆ. ಶ್ರೀಕಾಂತ್ ತ್ಯಾಗಿ ನಾಪತ್ತೆಯಾದ ಮೇಲೆ ಕೊನೇದಾಗಿ ಹರಿದ್ವಾರ ಮತ್ತು ಹೃಷಿಕೇಶದ ಮಧ್ಯದ ಸ್ಥಳದಲ್ಲಿ ಇದ್ದಿದ್ದು ಗೊತ್ತಾಗಿದೆ. ಹೀಗಾಗಿ ಅವರು ಉತ್ತರಾಖಂಡ್ಗೆ ಪರಾರಿಯಾಗಿರಬಹುದು ಎಂದು ಹೇಳಲಾಗಿದ್ದು, ಪತ್ನಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಶ್ರೀಕಾಂತ್ ತ್ಯಾಗಿ ಪತ್ನಿಯನ್ನು ಅವರಿದ್ದ ಫ್ಲ್ಯಾಟ್ನಿಂದ ಇಂದು ಮುಂಜಾನೆ 6ಗಂಟೆ ಹೊತ್ತಿಗೆ ಪೊಲೀಸರು ಕರೆದುಕೊಂಡುಹೋಗಿದ್ದಾರೆ. ಇವರೊಂದಿಗೆ ಶ್ರೀಕಾಂತ್ ಸಂಬಂಧಿಯೊಬ್ಬರನ್ನೂ ಪೊಲೀಸರು ಕರೆದುಕೊಂಡು ಹೋಗಿದ್ದಾಗಿ ವರದಿಯಾಗಿದೆ. ಇನ್ನು ಶ್ರೀಕಾಂತ್ ಎಲ್ಲ ಮೊಬೈಲ್ಗಳೂ ಸ್ವಿಚ್ ಆಫ್ ಆಗಿವೆ. ಆನ್ಲೈನ್ ಮೂಲಕವೂ ಅವರು ಯಾವುದೇ ವ್ಯವಹಾರ ನಡೆಸುತ್ತಿಲ್ಲ ಎಂದು ಹೇಳಲಾಗಿದೆ. ಯೋಗಿ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆಗೆ ಹೆದರಿದ್ದ ಶ್ರೀಕಾಂತ್ ತ್ಯಾಗಿ, ತಾನು ಶರಣಾಗುತ್ತೇನೆ, ಬಿಟ್ಟುಬಿಡಿ ಎಂದಿದ್ದ. ಆದರೆ ಈಗ ಸಂಪೂರ್ಣವಾಗಿ ಕಾಣೆಯಾಗಿದ್ದಾರೆ.
ವರದಿ ಕೇಳಿದ ಸಿಎಂ ಯೋಗಿ!
ಶ್ರೀಕಾಂತ್ ತ್ಯಾಗಿ ಕೇಸ್ನ್ನು ಸಿಎಂ ಯೋಗಿ ಆದಿತ್ಯನಾಥ್ ಗಂಭೀರವಾಗಿ ಪರಿಗಣಿಸಿದ್ದಾರೆ. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿರುವ ತ್ಯಾಗಿಯನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಎಲ್ಲಿವರೆಗೆ ಬಂದಿದೆ ಎಂಬ ಬಗ್ಗೆ ವರದಿ ಕೊಡುವಂತೆ ಗೃಹ ಇಲಾಖೆ ಬಳಿ ಕೇಳಿದ್ದಾರೆ. ಹಾಗೇ, ಪ್ರಕರಣವನ್ನು ವಿಸ್ತೃತವಾಗಿ ತನಿಖೆ ನಡೆಸುವಂತೆಯೂ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬುಲ್ಡೋಜರ್‌ಗೆ ಬೆದರಿದ ಉತ್ತರ ಪ್ರದೇಶ ಬಿಜೆಪಿ ನಾಯಕ, ಶರಣಾಗ್ತೀನಿ ಸ್ವಾಮೀ ಅಂದ!