ನವ ದೆಹಲಿ: ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ರಸ್ತೆಗಳಲ್ಲಿ ಸುಮ್ಮನೆ ಅನಗತ್ಯವಾಗಿ, ಅನುಮಾನಾಸ್ಪದವಾಗಿ ಓಡಾಡುವವರ ಮೇಲೆ ಕಣ್ಣಿಡಲು, ಅಲೆಮಾರಿಗಳ ಮೇಲೆ ನಿಗಾ ಇಡಲು ದೆಹಲಿ ಪೊಲೀಸರು(Delhi Police) ಮುಖ ಗುರುತಿಸುವಿಕೆ ಸಾಫ್ಟ್ವೇರ್ (FRS) ಬಳಕೆ ಮಾಡಲು ನಿರ್ಧರಿಸುತ್ತಿದ್ದಾರೆ. ಹಾಗೇ,ಕೆಂಪುಕೋಟೆ ಸುತ್ತಮುತ್ತ ಸಾವಿರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಲು ತೀರ್ಮಾನಿಸಿದ್ದಾರೆ.
ಅಲೆಮಾರಿಗಳು ಹೆಚ್ಚಾಗಿರುವ ಉತ್ತರ ದೆಹಲಿಯ ಭಾಗಗಳಲ್ಲಿ ಮುಖ ಗುರುತಿಸುವಿಕೆ ಸಾಫ್ಟ್ವೇರ್ ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಕೋಟ್ವಾಲಿ, ಲಾಹೋರಿ ಗೇಟ್ ಮತ್ತು ಕಾಶ್ಮೀರಿ ಗೇಟ್ ಬಳಿ ಕಟ್ಟೆಚ್ಚರ ವಹಿಸಲಾಗಿದೆ. ಕಳೆದ ಒಂದು ತಿಂಗಳಿಂದಲೂ ಈ ಭಾಗಗಳಲ್ಲಿ ಮುಖ ಗುರುತಿಸುವಿಕೆ ಅಭಿಯಾನ ನಡೆಸಲಾಗುತ್ತಿದ್ದು, ಸ್ಥಳೀಯ ಪೊಲೀಸ್ ಸಿಬ್ಬಂದಿಯೇ ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲೆಮಾರಿಗಳು ಮಲಗುವ ಫೂಟ್ಪಾತ್, ರಸ್ತೆ ಬದಿಯ ಸ್ಥಳಗಳು, ಅಂಗಡಿಗಳ ಎದುರಿಗೆಲ್ಲ ಭೇಟಿ ನೀಡುತ್ತಿದ್ದಾರೆ ಎಂದು ಉತ್ತರ ದೆಹಲಿ ಉಪ ಆಯುಕ್ತ ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ.
ಅಲೆಮಾರಿಗಳ ಹೆಸರು, ವಯಸ್ಸು, ಅವರ ಮೂಲ ಊರುಗಳ ಬಗ್ಗೆ ಮಾಹಿತಿ ಕಲೆ ಹಾಕಲು ಒಂದು ಪೊಲೀಸ್ ತಂಡವನ್ನೇ ನಿಯೋಜಿಸಲಾಗಿದೆ. ಲಾಹೋರಿ ಗೇಟ್ನಲ್ಲಿರುವ ಸುಮಾರು 250 ಅಲೆಮಾರಿಗಳು ಸೇರಿ, ನೂರಾರು ಜನರ ಫೋಟೋಗಳನ್ನೂ ತೆಗೆದುಕೊಳ್ಳಲಾಗಿದೆ. ಹೀಗೆ ಎಲ್ಲ ಕಡೆಗಳಲ್ಲೂ ಅಲೆಮಾರಿಗಳು, ಅನುಮಾನಾಸ್ಪದ ವ್ಯಕ್ತಿಗಳ ಫೋಟೋ ತೆಗೆದುಕೊಂಡು, ಅವರ ಬಗ್ಗೆ ವಿವರಗಳನ್ನು ಸಂಗ್ರಹಿಸಲಾಗಿದೆ. ನಾವು ಮುಖ ಗುರುತಿಸುವಿಕೆ ಸಾಫ್ಟ್ವೇರ್ನಲ್ಲಿ ಈ ಫೋಟೋಗಳನ್ನೆಲ್ಲ ಅಳವಡಿಸುತ್ತೇವೆ. ಇವರಲ್ಲಿ ಯಾರೇ, ಯಾವುದೇ ಕ್ರೈಂ, ಕಾನೂನು ಬಾಹಿರ ಚಟುವಟಿಕೆ ನಡೆಸಿದರೂ ಸುಲಭವಾಗಿ ಗುರುತಿಸಬಹುದು. ಕಾನೂನು ಕ್ರಮ ತೆಗೆದುಕೊಳ್ಳಲು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Amrit Mahotsav | ಪ್ರಥಮ ಸ್ವಾತಂತ್ರ್ಯ ಸೇನಾನಿ ತಿರುನಲ್ವೇಲಿಯ ಪೂಲಿತ್ತೇವನ್